ADVERTISEMENT

ರಾಜ್ಯಕ್ಕೆ ವಿಶೇಷ ಅನುದಾನ ಬಾಕಿ ಇಲ್ಲ: ಲೋಕಸಭೆಯಲ್ಲಿ ಸಚಿವ ಪಂಕಜ್‌ ಚೌಧರಿ ಉತ್ತರ

ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಲಿಖಿತ ಉತ್ತರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 15:22 IST
Last Updated 1 ಡಿಸೆಂಬರ್ 2025, 15:22 IST
<div class="paragraphs"><p>ಹಣ </p></div>

ಹಣ

   

ನವದೆಹಲಿ: ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಯಾವುದೇ ವಿಶೇಷ ಅನುದಾನವನ್ನು ಬಾಕಿ ಇರಿಸಿಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಳ್ಳಾರಿ ಸಂಸದ ಇ.ತುಕಾರಾಮ್‌ ಕೇಳಿದ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ. 

ADVERTISEMENT

ರಾಜ್ಯಕ್ಕೆ ಆಗಿರುವ ವರಮಾನ ನಷ್ಟಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು 15ನೇ ಹಣಕಾಸು ಆಯೋಗವು ಮೊದಲನೇ ವರದಿಯಲ್ಲಿ ಶಿಫಾರಸು ಮಾಡಿತ್ತು. ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ ₹3,000 ಕೋಟಿ ಹಾಗೂ ಬೆಂಗಳೂರಿನ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ ₹3 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಆಯೋಗವು ಎರಡನೇ ವರದಿಯಲ್ಲಿ ತಿಳಿಸಿತ್ತು. ರಾಜ್ಯಕ್ಕೆ ಒಟ್ಟು ₹11,495 ಕೋಟಿ ವಿಶೇಷ ಅನುದಾನ ಬಾಕಿ ಇದೆ ಎಂದು ರಾಜ್ಯ ಸರ್ಕಾರವು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಲವು ಸಲ ಪತ್ರ ಬರೆದಿತ್ತು ಹಾಗೂ ಮನವಿ ಸಲ್ಲಿಸಿತ್ತು. 

ಹಣಕಾಸು ಸಚಿವಾಲಯವು 2025–26ನೇ ಸಾಲಿನಲ್ಲಿ ಕರ್ನಾಟಕಕ್ಕೆ ಬಡ್ಡಿ ರಹಿತ ಸಾಲದ ರೂಪದಲ್ಲಿ 36 ಯೋಜನೆಗಳ ಅನುಷ್ಠಾನಕ್ಕೆ ₹1,811 ಕೋಟಿ ಬಿಡುಗಡೆ ಮಾಡಿದೆ.
ಪಂಕಜ್‌ ಚೌಧರಿ, ಹಣಕಾಸು ಖಾತೆ ರಾಜ್ಯ ಸಚಿವ

ದೆಹಲಿಗೆ ₹5.56 ಲಕ್ಷ ಕೋಟಿ–ರಾಜ್ಯಕ್ಕೆ ₹₹14,379 ಕೋಟಿ 

ಕೇಂದ್ರ ವಲಯ ಯೋಜನೆಗಳ ಅಡಿಯಲ್ಲಿ ದೆಹಲಿಗೆ 2024–25ನೇ ಸಾಲಿನಲ್ಲಿ ₹5.56 ಲಕ್ಷ ಕೋಟಿ ಬಿಡುಗಡೆಯಾಗಿದ್ದರೆ, ರಾಜ್ಯಕ್ಕೆ ಬಂದಿರುವ ಅನುದಾನ ₹14,379 ಕೋಟಿ.

ಲೋಕಸಭೆಗೆ ಕೇಂದ್ರ ಹಣಕಾಸು ಸಚಿವರು ಸೋಮವಾರ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ. ಮಹಾರಾಷ್ಟ್ರಕ್ಕೆ ₹76,787 ಕೋಟಿ ಬಿಡುಗಡೆಯಾಗಿದೆ. ಹರಿಯಾಣಕ್ಕೆ ₹22,970 ಕೋಟಿ, ಒಡಿಶಾಕ್ಕೆ ₹17,408 ಕೋಟಿ, ತೆಲಂಗಾಣಕ್ಕೆ ₹17,795 ಕೋಟಿ ನೀಡಲಾಗಿದೆ. ಸಣ್ಣ ರಾಜ್ಯಗಳಿಗಿಂತಲೂ ರಾಜ್ಯಕ್ಕೆ ಕಡಿಮೆ ಅನುದಾನ ಬಂದಿದೆ. 

ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲೂ ಕುಸಿತ:
ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಲ್ಲೂ ರಾಜ್ಯಕ್ಕೆ ಬರುತ್ತಿರುವ ಅನುದಾನ ಗಣನೀಯ
ವಾಗಿ ಕುಸಿದಿದೆ. 2021–22ರಲ್ಲಿ ₹18,297 ಕೋಟಿ, 2022–23ರಲ್ಲಿ ₹19,191ಕೋಟಿ ಹಾಗೂ 2023–24ರಲ್ಲಿ ₹19,421 ಕೋಟಿ ಬಂದಿದ್ದರೆ, 2024–25ರಲ್ಲಿ ಕೊಟ್ಟಿ
ರುವುದು ₹14,807 ಕೋಟಿ ಮಾತ್ರ. 

ಸಚಿವಾಲಯಗಳ ಮಾರ್ಗಸೂಚಿಗಳು, ರಾಜ್ಯದಿಂದ ಅನುದಾನ ಬೇಡಿಕೆ, ಹಿಂದೆ ಬಿಡುಗಡೆಯಾದ ನಿಧಿಯ ಬಳಕೆಯ ಪ್ರಮಾಣಪತ್ರಗಳ ಸಲ್ಲಿಕೆ ಮತ್ತು ಅದಕ್ಕೆ ಅನುಗುಣವಾಗಿ ರಾಜ್ಯ ಪಾಲಿನ ಮೊತ್ತಕ್ಕೆ ಅನುಗುಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗು
ತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.