ADVERTISEMENT

ಧಾರವಾಡ: ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿಗಳಿಗೆ ನೆರವಿನ ಹಸ್ತ

ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ನಡೆದ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 14:35 IST
Last Updated 10 ಏಪ್ರಿಲ್ 2022, 14:35 IST
ನಬೀಸಾಬ್
ನಬೀಸಾಬ್   

ಧಾರವಾಡ: ಇಲ್ಲಿನ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಶ್ರೀರಾಮಸೇನೆ ಕಾರ್ಯಕರ್ತರ ದಾಳಿಗೆ ಒಳಗಾದ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ಹಲವರು ಆರ್ಥಿಕ ಸಹಕಾರ ನೀಡಿ ಬೆಂಬಲಿಸಿದ್ದಾರೆ. ಜತೆಗೆ ಈ ಕೃತ್ಯಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ರಾಜ್ಯ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್ ನುಗ್ಗಿಕೇರಿಗೆ ಭೇಟಿ ನೀಡಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಧೈರ್ಯ ತುಂಬಿದರು. ದಾಳಿಗೊಳಗಾದನಾಲ್ಕು ಅಂಗಡಿಗಳಿಗೆ ತಲಾ ₹25ಸಾವಿರ ಪರಿಹಾರ ನೀಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನೋದ ಅಸೂಟಿ, ಮಹಾನಗರ ಜಿಲ್ಲಾ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ್, ‘ಮೊದಲಿಗೆ ಹಿಜಾಬ್ ಗಲಾಟೆ ಆಯಿತು. ಇದೀಗ ಹಿಂದೂಯೇತರ ವ್ಯಾಪಾರ ವಿಷಯ ಬಂದಿದೆ. ಕಲ್ಲಂಗಡಿ, ಮಾವು ಯಾವುದೇ ಇರಲಿ ಅದನ್ನು ಬೀದಿಗೆ ಚೆಲ್ಲಿ ಹಾಳು ಮಾಡಿದರೆ ಅದು ನೇರವಾಗಿ ರೈತರ ಮೇಲೆ ಮಾಡುವ ದಾಳಿಯಾಗಿದೆ. ಇವೆಲ್ಲದಕ್ಕೂ ಸರ್ಕಾರದ ಕುಮ್ಮಕ್ಕು ಇದೆ. ಆಡಳಿತ ನಡೆಸುತ್ತಿರುವ ಪಕ್ಷದ ನಾಯಕರೂ ಪ್ರಚೋದನೆ ನೀಡುವ ಹೇಳಿಕೆಯನ್ನೇ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ನೀಡಿದ ₹10ಸಾವಿರವನ್ನು ಪಕ್ಷದ ಕಾರ್ಯಕರ್ತರು ನಬೀಸಾಬ್‌ಗೆ ನೀಡಿದರು. ಲಡಾಯಿ ಪ್ರಕಾಶದನ ಬಸವರಾಜ ಸೂಳಿಬಾವಿ ₹2ಸಾವಿರ ನೆರವು ನೀಡಿದರು.

ನೆರವು ಸ್ವೀಕರಿಸ ಮಾತನಾಡಿದ ನಬೀಸಾಬ್, ‘ಹನುಮಪ್ಪನದಯೆಯಿಂದಲೇ ಕಳೆದ 15 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸಿಕೊಂಡು ಬಂದಿದ್ದೇನೆ. ಆತನಿಂದಾಗಿಯೇ ವಾರಕ್ಕೆ ₹2ಸಾವಿರ ವ್ಯಾಪಾರವಾಗುತ್ತಿತ್ತು. ಅದರಲ್ಲೇ ಕುಟುಂಬ ನಿರ್ವಹಣೆಯೂ ನಡೆಯುತ್ತಿತ್ತು. ಈಗ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ನನಗೆ ಕೊನೆಯ ಪಕ್ಷ ಆ ಹನುಮಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೂ ಸಾಕು’ ಎಂದು ಅಂಗಲಾಚಿದರು.

‘8ರಿಂದ 10 ಜನರಿದ್ದ ತಂಡ ಅಂಗಡಿಯನ್ನು ಹಾಳು ಮಾಡಿತು. ಆದರೆ ಅವರು ಯಾರೂ ಎಂಬುದೂ ನನಗೆ ಗೊತ್ತಿಲ್ಲ. ಅವರೊಂದಿಗೆ ನನ್ನ ವೈಯಕ್ತಿಕ ದ್ವೇಷವೂ ಇಲ್ಲ. ಹಣ್ಣು ಎಸೆಯುವ ಬದಲು, ಜನರಿಗಾದರೂ ಕೊಟ್ಟಿದ್ದರೆ ಅವರ ಹೊಟ್ಟೆಯಾದರೂ ತಣ್ಣಗೆ ಇರುತ್ತಿತ್ತು’ ಎಂದರು.

ಈ ಸುದ್ದಿ ರಾಷ್ಟ್ರಮಟ್ಟದ ಸುದ್ದಿ ಆಗುತ್ತಿದ್ದಂತೆಯೇ ದೇಶದ ಹಲವು ಪ್ರದೇಶಗಳಿಂದ ನಬೀಸಾಬ್‌ಗೆ ಕರೆಗಳ ಮಹಾಪೂರವೇ ಹರಿದುಬರುತ್ತಿತ್ತು. ಕರೆ ಮಾಡಿದವರು ಧೈರ್ಯ ಹೇಳಿ ಸಂತೈಸುತ್ತಿದ್ದರು.

ಪ್ರಕರಣ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ದಿನೇಶ ಗುಂಡೂರಾವ್, ‘ಇದೊಂದು ಹೇಯ ಮತ್ತು ಹೀನ ಕೃತ್ಯ. ಬಡ ಮುಸ್ಲಿಮನೊಬ್ಬನ ಅಂಗಡಿ ನಾಶಪಡಿಸಿ, ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮಸೇನೆಯವರು ಸಾಧಿಸಿದ್ದೇನು? ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ? ಶ್ರೀರಾಮಸೇನೆಯವರು ನಡೆಸಿದ ದಾಂದಲೆ ಭಯೋತ್ಪಾದನೆಗೆ ಸಮ. ಶ್ರೀರಾಮನ ತತ್ವಾದರ್ಶಗಳನ್ನು ನಿಜವಾಗಿ ಪಾಲಿಸುವವರು ಇಂಥ ಕಿರಾತಕ ಕೆಲಸ ಮಾಡುವುದಿಲ್ಲ. ಶ್ರೀರಾಮಸೇನೆಯ ಕೃತ್ಯ ರಾಮನ ಹೆಸರಿಗೆ ಕಳಂಕ ತರುವ ಯತ್ನ. ದಾಂದಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು’ ಎಂದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಬೀಸಾಬ್‌ನಿಂದ ಹೇಳಿಕೆ ಪಡೆದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ‘ದಾಳಿ ನಡೆಸಿದ್ದಾರೆ ಎನ್ನಲಾದ 8ರಿಂದ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದ್ದು, ಈವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.