ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ್ ಜೋಶಿ ಅಧಿಕಾರವಧಿಯಲ್ಲಿನ ಆರ್ಥಿಕ ಅಶಿಸ್ತನ್ನು ತನಿಖೆಗೆ ಒಳಪಡಿಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಬೇಕು. ಸರ್ವಾಧಿಕಾರಿ ಧೋರಣೆ ಹೊಂದಿರುವ ಅಧ್ಯಕ್ಷರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಒತ್ತಾಯಿಸಿದರು.
‘ಪರಿಷತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತನಿಖೆ ಪೂರ್ಣಗೊಳ್ಳುವ ವರೆಗೂ ಅಧ್ಯಕ್ಷರನ್ನು ಅಮಾನತ್ತಿನಲ್ಲಿಟ್ಟು ಆಡಳಿತಾಧಿಕಾರಿ ನೇಮಕ ಮಾಡಬೇಕು. ಸಮಿತಿಯ ವರದಿಯನ್ನು ಆಧರಿಸಿ ಅಧ್ಯಕ್ಷ ಸ್ಥಾನದಿಂದ ಜೋಶಿ ಅವರನ್ನು ವಜಾಗೊಳಿಸಬೇಕು. ಸಾಹಿತ್ಯ ಪರಿಷತ್ತಿಗೆ ಶೀಘ್ರ ಮರು ಚುನಾವಣೆ ನಡೆಸಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ತರುವಂತೆ ನಡೆದುಕೊಂಡವರು ಜೋಶಿ. ಪಕ್ಷ ರಾಜಕಾರಣವನ್ನು ಬಳಸಿಕೊಂಡು ಸಾಂಸ್ಕೃತಿಕ ವಾತಾವರಣ ಮಾಲಿನ್ಯಗೊಳಿಸಿದ್ದಾರೆ. ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯದ ಸೂಕ್ಷ್ಮತೆ, ಸಾಂಸ್ಕೃತಿಕ ಸಂವೇದನಾಶೀಲತೆ ಮರೆತು ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ, ನಾಡಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿದರು.
‘ಅರಮನೆಗೆ ಸೀಮಿತವಾಗಿದ್ದ ಕಲೆ, ಸಾಹಿತ್ಯ, ಸಂಗೀತವನ್ನು ಜನರ ಬಳಿಗೆ ತಂದವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಪರಿಷತ್ತಿಗೆ ಸ್ವಾಯತ್ತತೆ ನೀಡಿ ಪ್ರೋತ್ಸಾಹಿಸಿದ್ದರು. ಸಾಹಿತ್ಯ ಪರಿಷತ್ತನ್ನು ಎಂದಿಗೂ ಅರಮನೆಯ ತಮಟೆಯಾಗಿ ಬಳಸಿಕೊಳ್ಳಲಿಲ್ಲ. ಅವರ ಆಶಯಗಳಿಗೆ ವಿರುದ್ಧವಾಗಿ ಜೋಶಿ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.
‘ಸಾಹಿತ್ಯ ಪರಿಷತ್ತಿನಲ್ಲಿ 4.5 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ. ಹೆಚ್ಚು ಸದಸ್ಯರು ಇರುವ ಸ್ಥಳದಲ್ಲಿ ಸರ್ವ ಸದಸ್ಯರ ಸಭೆ ಕರೆಯುವುದು ಅಧ್ಯಕ್ಷರ ನೈತಿಕ ಜವಾಬ್ದಾರಿ. ಸಾರಿಗೆ ಸೌಲಭ್ಯಕ್ಕೆ ಅನುಕೂಲ ಇಲ್ಲದಿರುವ ಹಾಗೂ ವಸತಿ ಸೌಲಭ್ಯ ಸಮರ್ಪಕವಾಗಿ ಹೊಂದಿರದ ಸಂಡೂರಿನಲ್ಲಿ ಸಭೆ ಕರೆದಿರುವುದರ ಹಿಂದೆ ಹುನ್ನಾರ ಅಡಗಿದೆ’ ಎಂದು ವಾಗ್ದಾಳಿ ನಡೆಸಿದರು.
‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅರಿವು ಮತ್ತು ಅಕ್ಷರ ಜಾತ್ರೆಯೇ ಹೊರತು ಮೆರವಣಿಗೆಯಲ್ಲ. ದುಂದು ವೆಚ್ಚಕ್ಕೆ, ರಾಜಕೀಯ ಹಿತಾಸಕ್ತಿಗೆ ಸಾಹಿತ್ಯ ವೇದಿಕೆ ದುರ್ಬಳಕೆ ಮಾಡಿಕೊಳ್ಳಲು ಕನ್ನಡಿಗರು ಅವಕಾಶ ನೀಡುವುದಿಲ್ಲ. ರಾಜ್ಯ ಸರ್ಕಾರವು ಸಮ್ಮೇಳನಕ್ಕೆ ₹ 40 ಕೋಟಿ ಅನುದಾನ ನೀಡುವ ಬದಲು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಒದಗಿಸಿದರೆ ಅನುಕೂಲ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಳೆದುಹೋದರೆ ಪ್ರಾದೇಶಿಕ ಅಸ್ಮಿತೆಯೂ ನಾಶವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಸಾಹಿತಿಗಳಾದ ಆರ್.ಜಿ.ಹಳ್ಳಿ ನಾಗರಾಜ್, ಮಲ್ಲಿಕಾರ್ಜುನ್ ಕಲಮರಹಳ್ಳಿ, ಸುಕನ್ಯಾ ಹಾಜರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ. ಈ ಕುರಿತು ಸಾಹಿತಿಗಳು ಧ್ವನಿಯತ್ತಿರುವುದಕ್ಕೆ ನನ್ನ ಬೆಂಬಲವಿದೆ. ಪರಿಷತ್ತು ಸ್ವಾಯತ್ತತೆ ಉಳಿಸಿಕೊಳ್ಳಬೇಕುಮಹಿಮ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ, ಜೆಡಿಯು
ಪರಿಷತ್ತಿನ ಬೈ–ಲಾವನ್ನು ಉಚಿತವಾಗಿ ನೀಡುವ ಬದಲು ₹ 25 ದರ ನಿಗದಿಪಡಿಸಲಾಗಿದೆ. ಅಧ್ಯಕ್ಷರ ಭಾವಚಿತ್ರ ಸಹಿತ 10,000 ಪ್ರತಿ ಮುದ್ರಿಸಿ ದುಂದು ವೆಚ್ಚ ಮಾಡಲಾಗಿದೆಡಾ.ವಸುಂಧರಾ ಭೂಪತಿ, ಲೇಖಕಿ
‘ಸರ್ವ ಸದಸ್ಯರ ಸಭೆ ತಡೆಯುತ್ತೇವೆ’
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜೂನ್ 29ರಂದು ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆಯನ್ನು ತಡೆಯುತ್ತೇವೆ ಎಂದು ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
‘ಜೋಶಿ ಅಧ್ಯಕ್ಷರಾದ ಬಳಿಕ ಕನ್ನಡಪರ ಕೆಲಸಗಳು ಪರಿಷತ್ತಿನಲ್ಲಿ ನಡೆಯುತ್ತಿಲ್ಲ. ಪರಿಷತ್ತಿನ ಬೈ–ಲಾಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.