ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೃತ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಆಧಾರದಲ್ಲಿ ಜಗದೀಶ್ (ಎ1), ಕಿರಣ್ (ಎ2), ವಿಮಲ್ (ಎ3), ಅನಿಲ್ (ಎ4), ಬೈರತಿ ಬಸವರಾಜ್ (ಎ5) ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಿರಣ್, ವಿಮಲ್, ಮದನ್ ಹಾಗೂ ಸ್ಯಾಮ್ಯುಯಲ್ ಪ್ಯಾಟ್ರಿಕ್ ಎಂಬವರನ್ನು ಬುಧವಾರ ಸಂಜೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಶಿವಪ್ರಕಾಶ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಹಲಸೂರಿನಲ್ಲಿರುವ ಮನೆಯ ಎದುರು ಮಂಗಳವಾರ ರಾತ್ರಿ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದರು. ಶಿವಪ್ರಕಾಶ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಭಾರತಿನಗರ ಠಾಣೆಯಲ್ಲಿ ಶಿವಪ್ರಕಾಶ್ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು ಎಂದು ಮೂಲಗಳು ಹೇಳಿವೆ.
‘ಕಿತ್ತಗನೂರು ಬಳಿ, ಪುತ್ರ ಶಿವಪ್ರಕಾಶ್ 2023ರಲ್ಲಿ ಜಮೀನು ಖರೀದಿಸಿದ್ದ. ಅವನ ಹೆಸರಿನಲ್ಲಿ ಜಿಪಿಎ ಸಹ ಮಾಡಿಸಿಕೊಂಡಿದ್ದ. ಆ ಜಾಗದಲ್ಲಿ ಶೆಡ್ ನಿರ್ಮಿಸಿ ಜ್ಯೋತಿ ಹಾಗೂ ಹಂಸ ಅವರನ್ನು ಕಾವಲಿಗೆ ಇಟ್ಟಿದ್ದ. ಕಳೆದ ಫೆಬ್ರುವರಿ 11ರಂದು ಜಗದೀಶ್ ಹಾಗೂ ಕಿರಣ್ ಅತಿಕ್ರಮವಾಗಿ ಜಮೀನಿಗೆ ಪ್ರವೇಶಿಸಿ ಹೆಣ್ಣು ಮಕ್ಕಳನ್ನು ಶೆಡ್‌ನಿಂದ ಹೊರಕ್ಕೆ ಹಾಕಿದ್ದರು. ಆರೋಪಿ ಜಗದೀಶ್ ಕರೆ ಮಾಡಿ ಸ್ವತ್ತನ್ನು ತನ್ನ ಹೆಸರಿಗೆ ಜಿಪಿಎ ಮಾಡಿಸಿಕೊಡಬೇಕು. ಇಲ್ಲದಿದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಮಗನಿಗೆ ಬೆದರಿಕೆ ಹಾಕಿದ್ದ. ಜೀವಕ್ಕೆ ಅಪಾಯವಿದೆ ಎಂದು ಹೇಳಿ ಜಗದೀಶ್ ಅಲಿಯಾಸ್ ಜಗ್ಗ, ಕಿರಣ್, ಶಾಸಕ ಬೈರತಿ ಬಸವರಾಜ್ ವಿರುದ್ಧ ನನ್ನ ಮಗ ಪೊಲೀಸರಿಗೆ ದೂರು ನೀಡಿದ್ದ. ಅವರಿಂದ ಪ್ರಾಣಭಯ ಇದೆ ಎಂದು ಮನೆಯಲ್ಲೂ ಆಗಾಗ್ಗೆ ಹೇಳುತ್ತಿದ್ದ’ ಎಂದು ವಿಜಯಲಕ್ಷ್ಮಿ ನೀಡಿದ ದೂರು ಆಧರಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಮಗ ಮನೆಯಿಂದ ಹೊರಗೆ ಹೋಗಿದ್ದ. ಆಗ, ಮನೆಯ ಹೊರಗಡೆ ಯಾರೋ ಕೂಗಾಡುವ ಶಬ್ದ ಕೇಳಿಸಿತು. ಹೊರಗೆ ಬಂದು ನೋಡಿದಾಗ 9 ಮಂದಿ ಅಪರಿಚಿತರು ಮಗನಿಗೆ ಮಾರಕಾಸ್ತ್ರಗಳಿಂದ ಹೊಡೆಯುತ್ತಿದ್ದರು. ಜಾಗದ ವಿಚಾರವಾಗಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಇತರರು ಬೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
‘ದುರುದ್ದೇಶದಿಂದ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತರಲಾಗಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಶಿವು ಯಾರು ಎಂಬುದೇ ಗೊತ್ತಿಲ್ಲ. ಪೊಲೀಸರು ಪ್ರಾಥಮಿಕ ತನಿಖೆ ನಡೆಸದೆ ನನ್ನ ಮೇಲೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಶಾಸಕ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ‘ಕ್ಷೇತ್ರದ ಶಾಸಕನಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಅದನ್ನು ಹೊರತು ಪಡಿಸಿ ಜಮೀನು ವ್ಯವಹಾರ ಕೊಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಆರೋಪ ಹೊರಿಸಿ ತೇಜೋವಧೆಗೆ ಯತ್ನಿಸಲಾಗಿದೆ’ ಎಂದು ಹೇಳಿದರು. ‘ಅದು ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಮೀನು. ಕೆ.ಆರ್.ಪುರ ಕ್ಷೇತ್ರಕ್ಕೆ ಏನು ಸಂಬಂಧ? ಕಾನೂನು ಹೋರಾಟ ಮಾಡುತ್ತೇನೆ. ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ತಿಳಿಸಿದರು.
ಫೆಬ್ರುವರಿ 21ರಂದು ಜಗದೀಶ್ ಮತ್ತು ಇತರರ ವಿರುದ್ಧ ಭಾರತಿನಗರ ಠಾಣೆಗೆ ಶಿವಪ್ರಕಾಶ್ ದೂರು ನೀಡಿದ್ದರು. ‘ಕಿತ್ತಗನೂರು ಬಳಿ ನಾನು ಖರೀದಿಸಿದ್ದ ಜಾಗವನ್ನು ಮಾರಾಟ ಮಾಡುವಂತೆ ಜಗದೀಶ್ ಮತ್ತು ಇತರರಿಂದ ಜೀವ ಬೆದರಿಕೆ ಇದೆ. ನನ್ನೊಂದಿಗೆ ಆರೋಪಿಗಳು ಗಲಾಟೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಶಿವಪ್ರಕಾಶ್ ದೂರಿನಲ್ಲಿ ಉಲ್ಲೇಖಿಸಿದ್ದರು. ಆಗ ಜಗದೀಶ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧಾರದಲ್ಲಿ ಕೆಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಶಾಸಕ ಬೈರತಿ ಬಸವರಾಜ್ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುವುದು. ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.