ADVERTISEMENT

‘ನೋ ಬ್ರೋಕರ್’ ಸಂಸ್ಥಾಪಕರ ವಿರುದ್ಧ ಎಫ್‌ಐಆರ್

ದತ್ತಾಂಶ ಕದ್ದಿಟ್ಟುಕೊಂಡು ವಂಚಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 20:18 IST
Last Updated 27 ಜೂನ್ 2020, 20:18 IST

ಬೆಂಗಳೂರು: ಸಾಫ್ಟ್‌ವೇರ್ ಸೇವೆ ಒದಗಿಸುವ ಕಂಪನಿಯೊಂದರ ದತ್ತಾಂಶವನ್ನು ಕದ್ದಿಟ್ಟುಕೊಂಡು ವಂಚಿಸಿದ ಆರೋಪದಡಿ ‘ನೋ ಬ್ರೋಕರ್’ ಕಂಪನಿಯ ಸಂಸ್ಥಾಪಕರು ಸೇರಿದಂತೆ ಏಳು ಮಂದಿ ವಿರುದ್ಧ ಸಿಐಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ‘ವೀವಿಸ್ ಟೆಕ್ನಾಲಜೀಸ್’ ಕಂಪನಿಯ ಎ. ವಿಜಯ್ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ‘ನೋ ಬ್ರೋಕರ್’ ಕಂಪನಿಯ ಅಖಿಲ್ ಗುಪ್ತಾ, ಅಮಿತ್ ಕುಮಾರ್, ಸಂತಾನು ರಸ್ತೋಗಿ, ಮಯಾಂಕ್, ಪ್ರವೀಣ್ ರೆಡ್ಡಿ, ನರೇಂದ್ರ ಮಕ್ವಾನ್ ಹಾಗೂ ಸಿದ್ಧಾರ್ಥ್ ಮೆನನ್ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

‘ಸಾಫ್ಟ್‌ವೇರ್‌ಗಳ ದತ್ತಾಂಶವನ್ನು ಕಂಪನಿಯ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಕಂಪನಿಯ ಕೆಲ ಸಿಬ್ಬಂದಿಗೆ ಲಂಚದ ಆಮಿಷ ತೋರಿಸಿ ಬೆದರಿಕೆಯೊಡ್ಡಿದ್ದ ಆರೋಪಿಗಳು, ದತ್ತಾಂಶವನ್ನು ಹ್ಯಾಕ್‌ ಮಾಡಿ ಕದ್ದಿದ್ದಾರೆ. ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಕಂಪನಿಯ ಆಂತರಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ವಿಜಯ್ ಒತ್ತಾಯಿಸಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

’ಕೃತ್ಯದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.