ADVERTISEMENT

ಶಾಲಾ ಬಸ್‍ಗೆ ಬೆಂಕಿ: ಮಕ್ಕಳು ಪಾರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:19 IST
Last Updated 1 ಏಪ್ರಿಲ್ 2019, 20:19 IST
ಕಳಸ ತಾಲ್ಲೂಕಿನ ಮದ್ದಿನಕೊಪ್ಪ ಬಳಿ ಬೆಂಕಿಯಿಂದ ಹಾನಿಗೀಡಾದ ಖಾಸಗಿ ಶಾಲಾ ಬಸ್.  
ಕಳಸ ತಾಲ್ಲೂಕಿನ ಮದ್ದಿನಕೊಪ್ಪ ಬಳಿ ಬೆಂಕಿಯಿಂದ ಹಾನಿಗೀಡಾದ ಖಾಸಗಿ ಶಾಲಾ ಬಸ್.     

ಕಳಸ (ಚಿಕ್ಕಮಗಳೂರು): ತಾಲ್ಲೂಕಿನ ಬಾಳೆಹೊಳೆ- ಬಸರೀಕಟ್ಟೆ ನಡುವಿನ ಮದ್ದಿನಕೊಪ್ಪದ ಬಳಿ ಸೋಮವಾರ ಶಾಲಾ ಬಸ್‍ಗೆ ಬೆಂಕಿ ತಗುಲಿದ್ದು, ಸುಮಾರು 50 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕಳಸದಿಂದ ಬಸರೀಕಟ್ಟೆಯ ಸದ್ಗುರು ಶಾಲೆಗೆ 1ರಿಂದ 9ನೇ ತರಗತಿ ವರೆಗಿನ ಮಕ್ಕಳನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ಇದೆ. ಹೊಸ ಬಸ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದರಿಂದ ಸೋಮವಾರ ಹಳೆಯ ಬಸ್ ಬಳಸಲಾಗಿತ್ತು.

ಮಕ್ಕಳನ್ನು ಕಳಸ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಕರೆದುಕೊಂಡು ಬಸರೀಕಟ್ಟೆ ಕಡೆಗೆ ಬಸ್ಸಾಗಿತ್ತು. 9.30ರ ವೇಳೆಗೆ ಮದ್ದಿನಕೊಪ್ಪ ಬಳಿ ಬಸ್ಸಿನಲ್ಲಿ ಕಿಡಿ ಮತ್ತು ಹೊಗೆ ಕಾಣಿಸಿಕೊಂಡಿದೆ.

ADVERTISEMENT

‘ಬಸ್ಸಿನಲ್ಲಿ ಹೊಗೆ ಕಂಡ ಕೂಡಲೇ ಬಸ್ ಡ್ರೈವರ್ ಬಸ್ಸಿನ ಕಿಟಕಿ ತೆರೆದು ಕೆಳಕ್ಕೆ ಜಿಗಿದಿದ್ದಾರೆ. ಆಮೇಲೆ ಬಸ್ಸು ಹಿಂದಕ್ಕೆ ಚಲಿಸಿ ಸ್ವಲ್ಪ ದೂರ ಸಾಗಿ ರಸ್ತೆ ಬದಿಯಲ್ಲಿದ್ದ ಪ್ರಯಾಣಿಕರ ತಂಗುದಾಣಕ್ಕೆ ಡಿಕ್ಕಿ ಹೊಡೆದು ನಿಂತಿತು’ ಎಂದು ಮಕ್ಕಳು ತಿಳಿಸಿದ್ದಾರೆ.

ಆ ವೇಳೆಗೆ ಬೆಂಕಿ ಬಸ್ಸಿಗೆ ಆವರಿಸತೊಡಗಿದ್ದು ಮಕ್ಕಳು ಕಿರುಚಿಕೊಳ್ಳತೊಡಗಿದರು. ಬಸರೀಕಟ್ಟೆಯಿಂದ ಕಳಸದ ಕಡೆಗೆ ಬರುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಇದ್ದ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಬೆಂಕಿ ನಂದಿಸಲು ನೀರು ಸುರಿದಿದ್ದಾರೆ. ಎಲ್ಲ ಮಕ್ಕಳನ್ನೂ ಬಸ್ಸಿನಿಂದ ಹೊರಗೆ ಕರೆತರುವಲ್ಲಿ ಸ್ಥಳೀಯರು ಯಶಸ್ವಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.