ADVERTISEMENT

ಮೀನುಗಾರರ ಪತ್ತೆಗೆ ನಿರ್ಲಕ್ಷ್ಯ: ಉಡುಪಿಯಲ್ಲಿ ಸಾವಿರಾರು ಜನರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 7:19 IST
Last Updated 6 ಜನವರಿ 2019, 7:19 IST
ಮಲ್ಪೆ ಬಂದರಿನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು
ಮಲ್ಪೆ ಬಂದರಿನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು   

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮೀನುಗಾರರು ನಾಪತ್ತೆಯಾಗಿ 20 ದಿನಗಳು ಕಳೆದರೂ, ಪತ್ತೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಭಾನುವಾರ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದರು.

ಮಲ್ಪೆ ಬಂದರಿನಿಂದ ಉಡುಪಿಯ ಕರಾವಳಿ ಬೈಪಾಸ್‌ವರೆಗೂ ನಡೆದುಬಂದ ಪ್ರತಿಭಟನಾಕಾರರು ಮೀನುಗಾರರ ಶೀಘ್ರ ಪತ್ತೆಗೆ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಮೀನುಗಾರರು ಭಾಗವಹಿಸಿದ್ದಾರೆ. ಮೂರು ಜಿಲ್ಲೆಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಮೀನುಗಾರರು

ಮಹಿಳಾ ಮೀನು ಮಾರಾಟಗಾರರ ಸಂಘ ಹಾಗೂ ಮಹಿಳಾ ಸಂಘ–ಸಂಸ್ಥೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಮೀನುಗಾರರು ಧರಣಿಯಲ್ಲಿ ಭಾಗವಹಿಸಿದ್ದಾರೆ. ‘ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೇ?’ ‘ದೇಶ, ರಾಜ್ಯವನ್ನು ಆಳುವವರೇ ಮೀನುಗಾರರ ಸಂಕಷ್ಟ ಅರಿಯಿರಿ’ ‘ನಾಪತ್ತೆಯಾಗಿರುವ ಮೀನುಗಾರರನ್ನು ಹುಡುಕಿಕೊಡಿ’ ಎಂಬ ಘೋಷಣಾ ಫಲಕಗಳನ್ನು ಹಿಡಿದು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಪ್ರತಿಭಟನೆ ಸಾಗುವ ದಾರಿಯುದ್ದಕ್ಕೂ ಪ್ರತಿಭಟನಾಕಾರರಿಗೆ ತಂಪು ಪಾನೀಯವನ್ನು ವಿತರಿಸಲಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಅಂಬಲಪಾಡಿ ಹಾಗೂ ಕಿನ್ನಿಮೂಲ್ಕಿ ರಸ್ತೆ ಸಂಚಾರ ಕೆಲಹೊತ್ತು ಬಂದ್ ಆಗಿತ್ತು.

ಪ್ರತಿಭಟನಾ ಮೆರವಣಿಯಲ್ಲಿ ಭಾಗವಹಿಸಿದ್ದವರು

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಜಿ.ಶಂಕರ್‌, ಆನಂದ್ ಸಿ.ಕುಂದರ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಆನಂದ್‌ ಕುಂದರ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.