ADVERTISEMENT

ಬೈತಖೋಲ್‌ನಲ್ಲಿ ‘ಲೈಟ್ ಫಿಶಿಂಗ್‌’ ವಾಗ್ವಾದ

ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಟ್ರಾಲರ್ ದೋಣಿ ಮಾಲೀಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 12:16 IST
Last Updated 10 ಜನವರಿ 2019, 12:16 IST
ಕಾರವಾರದ ಬೈತಖೋಲ್ ಬಂದರಿನಲ್ಲಿ ಗುರುವಾರ ಮೀನುಗಾರರು ಗುಂಪಾಗಿ ಸೇರಿದ್ದರು
ಕಾರವಾರದ ಬೈತಖೋಲ್ ಬಂದರಿನಲ್ಲಿ ಗುರುವಾರ ಮೀನುಗಾರರು ಗುಂಪಾಗಿ ಸೇರಿದ್ದರು   

ಕಾರವಾರ: ಲೈಟ್ ಫಿಶಿಂಗ್ (ಎಲ್‌ಇಡಿ ಬಲ್ಬ್ ಬಳಸಿ ರಾತ್ರಿ ಮೀನುಗಾರಿಕೆ) ಮಾಡಿ ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿಗೆ ಬಂದ ಪರ್ಸೀನ್ ದೋಣಿಗಳನ್ನು ಟ್ರಾಲರ್ ದೋಣಿ ಮಾಲೀಕರು ಗುರುವಾರ ತಡೆದರು. ಇದು ಎರಡೂ ಗುಂ‍ಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಲೈಟ್ ಫಿಶಿಂಗ್‌ ಕುರಿತು ಜ.6ರಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ನೇತೃತ್ವದಲ್ಲಿ ಸಭೆ ನಡೆದಿತ್ತು. ಅದರಲ್ಲಿ ಪರ್ಸೀನ್ ಮತ್ತು ಟ್ರಾಲರ್ ದೋಣಿ ಮೀನುಗಾರರು ಭಾಗವಹಿಸಿದ್ದರು. ಪರ್ಸೀನ್‌ ದೋಣಿಗಳು ಅದಾಗಲೇ ಲೈಟ್ ಫಿಶಿಂಗ್‌ಗೆ ಹೋದ ಕಾರಣ ನಿಷೇಧದಿಂದ ಜ.9ರವರೆಗೆ ಸಡಿಲಿಕೆ ನೀಡಬೇಕು ಎಂದು ಸಭೆಯಲ್ಲಿ ಪರ್ಸೀನ್ ದೋಣಿಗಳ ಮೀನುಗಾರರು ಮನವಿ ಮಾಡಿದ್ದರು. ಅದರಂತೆ ಅನುಮತಿ ನೀಡಲಾಗಿತ್ತು.

ಈ ನಿಯಮವನ್ನು ಪಾಲಿಸದೇ 20ಕ್ಕೂ ಅಧಿಕ ದೋಣಿಗಳು ಜ.10ರಂದು ಮೀನು ಬೇಟೆಯಾಡಿ ತಂದಿದ್ದವು. ಅವುಗಳನ್ನು ಹರಾಜು ಹಾಕಲು ಮುಂದಾದಾಗಟ್ರಾಲರ್ ದೋಣಿಗಳ ಮೀನುಗಾರರು ಆಕ್ಷೇಪಿಸಿದರು. ಇದರಿಂದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಮೀನುಗಳನ್ನು ತಂದ ದೋಣಿಗಳ ಮಾಲೀಕರು ಮೀನು ವರ್ತಕರ ಮೇಲೆ ಒತ್ತಡ ಹೇರಿಖರೀದಿಸಲು ಹೇಳಿದರು. ಇದಕ್ಕೆ ಮಣಿದು ವರ್ತಕರು ಖರೀದಿಸಲು ಮುಂದಾದಾಗ ಮತ್ತೆ ವಾಗ್ವಾದ ತೀವ್ರಗೊಂಡಿತು. ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಪೊಲೀಸರು ಎರಡೂ ತಂಡಗಳಮೀನುಗಾರರನ್ನು ಸಮಾಧಾನಗೊಳಿಸಿದರು.

ಬೇಟೆಯಾಡಿ ತಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಹರಾಜಿಗೆ ಅವಕಾಶ ನೀಡಲಾಯಿತು. ಒಂದುವೇಳೆ, ಮತ್ತದೇ ರೀತಿ ನಿಯಮದ ಉಲ್ಲಂಘನೆಯಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದುಟ್ರಾಲರ್ ದೋಣಿಗಳ ಮೀನುಗಾರರು ಎಚ್ಚರಿಕೆ ನೀಡಿದರು.

‘ಕಾನೂನು ಪ್ರಕಾರ ಕ್ರಮ’:ಬೈತಖೋಲ್ ಬಂದರಿಗೆ ಬಂದ ಮೀನುಗಾರಿಕೆಯ ಇಲಾಖೆ ಉಪ ನಿರ್ದೇಶಕರು, ಎರಡೂ ಗುಂಪುಗಳ ಮೀನುಗಾರರ ಜತೆ ಸಭೆ ನಡೆಸಿದರು. ಇನ್ನುಮುಂದೆ, ಲೈಟ್ ಫಿಶಿಂಗ್ ನಡೆಸಬಾರದು ಎಂದು ಎಚ್ಚರಿಕೆ ನೀಡಲಾಯಿತು. ಇದೇವೇಳೆ, ಆರೋಪ– ಪ್ರತ್ಯಾರೋಪಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.