ADVERTISEMENT

Nepal Unrest: ಕಠ್ಮಂಡುವಿನಲ್ಲಿ ಹುಬ್ಬಳ್ಳಿಯ ಐವರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 23:50 IST
Last Updated 11 ಸೆಪ್ಟೆಂಬರ್ 2025, 23:50 IST
   

ಹುಬ್ಬಳ್ಳಿ: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ ಐವರು ನೇಪಾಳದ ಕಠ್ಮಂಡುವಿನಲ್ಲಿ ಸಿಲುಕಿದ್ದಾರೆ.

ಸತೀಶ ಬಿಂದು ಮಾಧವ ಕುಲಕರ್ಣಿ ಮತ್ತು ಅವರ ಬಂಧುಗಳು ಖಾಸಗಿ ಕಂಪನಿಯ ಪ್ಯಾಕೇಜ್‌ನ‌ಲ್ಲಿ ಆಗಸ್ಟ್‌ 31ರಂದು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಇವರೆಲ್ಲರೂ ಹುಬ್ಬಳ್ಳಿಯ ಕೇಶ್ವಾಪುರ, ವಿದ್ಯಾನಗರದ ನಿವಾಸಿಗಳು.

ಯಾತ್ರೆ ಸಂದರ್ಭದಲ್ಲೇ ಇವರ ಬಂಧು ನರೇಂದ್ರ ಜೋಶಿ (70) ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಬಿಂದು ಮಾಧವ ಕುಲಕರ್ಣಿ, ‘ಸದ್ಯ ಕಠ್ಮಂಡುವಿನ ಲಾಡ್ಜ್‌ನಲ್ಲಿ ಇದ್ದೇವೆ. ಹೊರಬರಲು ಭಯವಾಗುತ್ತಿದೆ. ಎಲ್ಲೆಂದರಲ್ಲಿ ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿದ್ದು, ಸಿಕ್ಕವರ ಮೇಲೆ ಗುಂಡು ಹಾರಿಸಲಾಗುತ್ತಿದೆ’ ಎಂದರು.

‘ಭಾರತೀಯ ರಾಯಭಾರಿ ಕಚೇರಿ ಮುಚ್ಚಲಾಗಿದೆ. ಧಾರವಾಡ ಜಿಲ್ಲಾಡಳಿತ ದಿಂದ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ. ಸೆ.13ಕ್ಕೆ ವಾಪಸ್ ಊರಿಗೆ ಬರಲು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದೇವೆ. ಭಯ, ಆತಂಕದಲ್ಲೇ ದಿನ ಕಳೆಯುತ್ತಿದ್ದೇವೆ’ ಎಂದು ಹೇಳಿದರು.  

‘ಕಠ್ಮಂಡುವಿನಲ್ಲಿ ಸಿಲುಕಿರುವ ಹುಬ್ಬಳ್ಳಿಯವರನ್ನು ಸಂಪರ್ಕಿಸಲಾಗಿದ್ದು, ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿದೆ. ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಪ್ರಯತ್ನ‌ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಉ.ಪ್ರ.ತಲುಪಿದ 22 ಮಂದಿ: 

ನೇಪಾಳ ಪ್ರವಾಸಕ್ಕೆ ತೆರಳಿದ್ದ ಹೊಸಪೇಟೆಯ 12 ಮಂದಿ ಮತ್ತು ತೋರಣಗಲ್‌ನ (ಬಳ್ಳಾರಿ ಜಿಲ್ಲೆ) 10 ಮಂದಿ ಸುರಕ್ಷಿತವಾಗಿ ಭಾರತದ ಗಡಿ ಪ್ರವೇಶಿಸಿದ್ದು, ಗೋರಖ್‌ಪುರದಿಂದ ತವರಿನತ್ತ ಪ್ರಯಾಣಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು. ತೋರಣಗಲ್‌ನ 10 ಮಂದಿ ಜಿಂದಾಲ್‌ ನೌಕರರು ಎಂಬ ಮಾಹಿತಿ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.