ADVERTISEMENT

ಗಾಲ್ಫ್‌ ಕ್ಲಬ್‌ಗೆ ಕಡಿಮೆ ಬಾಡಿಗೆ ನಿಗದಿ: ಲೆಕ್ಕಪತ್ರಗಳ ಸಮಿತಿ ಆಕ್ಷೇಪ

ಹಳೆ ವಿಮಾನ ನಿಲ್ದಾಣ ರಸ್ತೆಯ ಗಾಲ್ಫ್‌ ಕ್ಲಬ್

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 16:20 IST
Last Updated 28 ಜನವರಿ 2025, 16:20 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬೆಂಗಳೂರು ಗಾಲ್ಫ್‌ ಕ್ಲಬ್‌ಗೆ ಗುತ್ತಿಗೆ ಆಧಾರದಲ್ಲಿ 124 ಎಕರೆ ಜಮೀನನ್ನು ವರ್ಷಕ್ಕೆ ₹1 ಕೋಟಿಯಂತೆ ಬಾಡಿಗೆ ನಿಗದಿ ಮಾಡಿರುವ ಕ್ರಮದ ಬಗ್ಗೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಸಿ.ಸಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ, ‘ಇಂದಿನ ದಿನಮಾನಕ್ಕೆ ಅನುಗುಣವಾಗಿ ಬಾಡಿಗೆ ಮೊತ್ತವನ್ನು ಪರಿಷ್ಕರಿಸಬೇಕು. ಸರ್ಕಾರಕ್ಕೆ ಹೆಚ್ಚಿನ ಆದಾಯವೂ ಬರುತ್ತದೆ’ ಎಂದು ಸಮಿತಿ ಸದಸ್ಯರು ಸಲಹೆ ನೀಡಿದರು.

ADVERTISEMENT

ದೊಮ್ಮಲೂರು ಬಳಿ 1990ರಿಂದ ಗಾಲ್ಫ್‌ ಕ್ಲಬ್‌ಗೆ 124 ಎಕರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ಗುತ್ತಿಗೆ ಪರಿಷ್ಕರಿಸಲಾಗುತ್ತದೆ. ನಗರದ ಪ್ರಮುಖ ಭಾಗದಲ್ಲಿರುವ ಈ ಜಾಗಕ್ಕೆ ಅತ್ಯಂತ ಕಡಿಮೆ ಬಾಡಿಗೆ ನಿಗದಿ ಮಾಡಲಾಗಿದೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ಈಗಾಗಲೇ ಒಂದು ದೊಡ್ಡ ಗಾಲ್ಫ್‌ ಕ್ಲಬ್‌ ಇದೆ. ಆದ್ದರಿಂದ ಎಚ್‌ಎಎಲ್‌ ರಸ್ತೆಯಲ್ಲಿರುವ ಗಾಲ್ಫ್‌ ಕ್ಲಬ್‌ಗೆ 124 ಎಕರೆ ಪ್ರದೇಶದ ಅಗತ್ಯವಿಲ್ಲ. ಗಾಲ್ಫ್‌ಗೆ ಅಗತ್ಯವಿರುವಷ್ಟು ಜಾಗ ನೀಡಿ, ಉಳಿದ ಭೂಮಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬಹುದು. ಗುತ್ತಿಗೆ ನವೀಕರಣದ ಸಂದರ್ಭದಲ್ಲಿ ಹೆಚ್ಚು ಬಾಡಿಗೆ ನಿಗದಿ ಮಾಡಬೇಕು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂಬ ಸಲಹೆ ಬಂದಿತು.

ಅಲ್ಲದೇ, ಈ ಜಾಗದಲ್ಲಿರುವ ಖಾಸಗಿ ಐಷಾರಾಮಿ ಹೋಟೆಲ್‌ನಿಂದ ಬರುವ ಬಾಡಿಗೆಯೂ ಅತಿ ಕಡಿಮೆ ಇದೆ. ಅಕ್ಕಪಕ್ಕದಲ್ಲಿ ಭೂ ಒತ್ತುವರಿಯೂ ಆಗಿದೆ. ಈ ಜಾಗವನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ಅರ್ಹ ಬಾಡಿಗೆ ನೀಡುವ ಸಂಸ್ಥೆಗೆ ಹಸ್ತಾಂತರಿಸಬಹುದು ಎಂಬ ವಿಚಾರವೂ ಚರ್ಚೆ ಆಯಿತು ಎಂದು ಮೂಲಗಳು ತಿಳಿಸಿವೆ.

ಮುಂದಿನ ವಾರ ಸಮಿತಿ ಸಭೆ ನಡೆದ ಬಳಿಕ ಗಾಲ್ಫ್‌ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು. ಈ ಕ್ಲಬ್‌ ವಿಚಾರದಲ್ಲಿ ಐಎಎಸ್ ಅಧಿಕಾರಿಗಳ ಲಾಬಿ ತೀವ್ರವಾಗಿದೆ. ಸರ್ಕಾರ ಯಾವುದೇ ಪ್ರಭಾವಕ್ಕೂ ಮಣಿಯಬಾರದು ಎಂಬ ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.