ADVERTISEMENT

ಕೈಗಾರಿಕೆ: ನೋಂದಣಿ ಶುಲ್ಕ ಇಳಿಕೆ

₹20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲ್ಯಾಟ್‌ಗಳಿಗೂ ಅನ್ವಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:42 IST
Last Updated 12 ನವೆಂಬರ್ 2020, 19:42 IST
ಕೈಗಾರಿಕಾ ಪ್ರದೇಶ–ಸಾಂದರ್ಭಿಕ ಚಿತ್ರ
ಕೈಗಾರಿಕಾ ಪ್ರದೇಶ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ ಸಂಪನ್ಮೂಲ ಸಂಗ್ರಹವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗಾರಿಕಾ ಭೂಮಿಯ ನೋಂದಣಿ ಶುಲ್ಕ ಮತ್ತು ₹20 ಲಕ್ಷಕ್ಕೂ ಕಡಿಮೆ ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕದ ದರವನ್ನು ಶೇ 2ರಷ್ಟು ಇಳಿಕೆ ಮಾಡುವ ತೀರ್ಮಾನ ಕೈಗೊಂಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಾಹಿತಿ ನೀಡಿದರು.

‘ಈಗ ಕೈಗಾರಿಕಾ ಉದ್ದೇಶದ ಭೂಮಿ ನೋಂದಣಿ ಶುಲ್ಕ ಶೇ 5 ಇದ್ದು ಅದನ್ನು ಶೇ 3ಕ್ಕೆ, ₹20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ಶುಲ್ಕವನ್ನೂ ಶೇ 3ಕ್ಕೆ ಇಳಿಸಲಾಗುವುದು. ಇದರಿಂದ ನೋಂದಣಿ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚು ಮೌಲ್ಯದ ಫ್ಲ್ಯಾಟ್‌ಗಳಿಗೆ ಈ ಇಳಿಕೆ ಅನ್ವಯವಾಗುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಸಾಕಷ್ಟು ಉದ್ಯಮಿಗಳು ಕೈಗಾರಿಕಾ ಭೂಮಿ ಖರೀದಿಸಿಯೂ ನೋಂದಣಿ ಮಾಡಿಸಿಕೊಂಡಿಲ್ಲ. ಅವರಿಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ಕಡಿಮೆ ಬೆಲೆಯ ಫ್ಲ್ಯಾಟ್‌ಗಳನ್ನು ಖರೀದಿಸುವವರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ ಎಂದರು.

ಸಂಪುಟ ಉಪಸಮಿತಿ: ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕಸ್ತೂರಿರಂಗನ್‌ ವರದಿಯ ಕುರಿತು ನಾಲ್ಕನೇ ಕರಡು ಅಧಿಸೂಚನೆ ಹೊರಡಿಸಿದೆ. ಇದೇ ವರ್ಷದ ಡಿ. 31 ರೊಳಗೆ ವರದಿ ಜಾರಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ರಾಷ್ಟ್ರೀಯ ಹಸಿರು ಪೀಠ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ. ಈ ವರದಿ ತಿರಸ್ಕರಿಸಬೇಕು ಎಂದು ಮಲೆನಾಡು ಭಾಗದ ಶಾಸಕರು ಒತ್ತಡ ಹಾಕುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.