ADVERTISEMENT

ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿಗೆ ನಾಳೆಯಿಂದ ವಿಮಾನ

​ಪ್ರಜಾವಾಣಿ ವಾರ್ತೆ
Published 24 ಮೇ 2020, 14:49 IST
Last Updated 24 ಮೇ 2020, 14:49 IST
ಸ್ಟಾರ್‌ ಏರ್‌ ವಿಮಾನ
ಸ್ಟಾರ್‌ ಏರ್‌ ವಿಮಾನ    

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಆತಂಕದಿಂದ ಬರೋಬ್ಬರಿ ಎರಡು ತಿಂಗಳ ಹಿಂದೆ ವಾಣಿಜ್ಯ ನಗರಿಯಿಂದ ರದ್ದಾಗಿದ್ದ ವಿಮಾನಯಾನ ಸೌಲಭ್ಯ ಸೋಮವಾರದಿಂದ (ಮೇ 25) ಬೆಂಗಳೂರು ಮತ್ತು ಹಿಂಡನ್‌ (ದೆಹಲಿ ಹೊರವಲಯದ ಸ್ಥಳ) ಎರಡೂ ಮಾರ್ಗಗಳಿಂದ ಪುನರಾರಂಭವಾಗಲಿವೆ.

ಸ್ಟಾರ್‌ ಏರ್‌ ಸಂಸ್ಥೆಯ ವಿಮಾನವು ಬೆಂಗಳೂರಿನಿಂದ ಮಧ್ಯಾಹ್ನ 12ಕ್ಕೆ ಹೊರಟು 1 ಗಂಟೆಗೆ ಇಲ್ಲಿಗೆ ಬರಲಿದೆ. ರಾತ್ರಿ 7.55ಕ್ಕೆ ಹುಬ್ಬಳ್ಳಿಯಿಂದ ಹೊರಟು 8.50ಕ್ಕೆ ಬೆಂಗಳೂರು ತಲುಪಲಿದೆ. ಈ ಪ್ರಯಾಣದ ದರ ₹3,590ರಿಂದ ಆರಂಭವಾಗಲಿದೆ.

ಮಧ್ಯಾಹ್ನ 1.30ಕ್ಕೆ ಇಲ್ಲಿಂದ ಹೊರಡುವ ಸ್ಟಾರ್‌ ಏರ್‌ ವಿಮಾನ 4.10ಕ್ಕೆ ದೆಹಲಿ ತಲುಪಲಿದ್ದು, ದೆಹಲಿಯಿಂದ 4.45ಕ್ಕೆ ಹೊರಟು ರಾತ್ರಿ 7.25ಕ್ಕೆ ಹುಬ್ಬಳ್ಳಿಗೆ ಬರಲಿದೆ. ಈ ಪ್ರಯಾಣದ ದರ ₹5,699 ರಿಂದ ಶುರುವಾಗಲಿದೆ.

ADVERTISEMENT

ಸ್ಟಾರ್‌ ಏರ್‌ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ, ಅಹಮದಾಬಾದ್‌, ಇಂದೋರ್‌, ಕಿಶನ್‌ಗಡ, ಮುಂಬೈ ಮತ್ತು ತಿರುಪತಿಗೆ ವಿಮಾನ ಸೌಲಭ್ಯ ಹೊಂದಿದೆ. ಎರಡು ತಿಂಗಳ ಬಳಿಕ ಮೊದಲ ಹಂತದಲ್ಲಿ ಎರಡು ಊರುಗಳಿಗೆ ಮಾತ್ರ ಸೇವೆ ನೀಡಲು ನಿರ್ಧರಿಸಿದೆ.

ಏರ್‌ ಇಂಡಿಯಾ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ ವಿಮಾನಯಾನ ಹೊಂದಿದೆ. ಇಂಡಿಗೊ ಸಂಸ್ಥೆ ಅಹಮದಬಾದ್‌, ಕಣ್ಣೂರು, ಕೊಚ್ಚಿ, ಚೆನ್ನೈ, ಗೋವಾ, ಬೆಂಗಳೂರು ಮತ್ತು ಮಂಗಳೂರಿಗೆ ವಿಮಾನ ಸೌಲಭ್ಯಗಳನ್ನು ಹೊಂದಿದೆ. ಸದ್ಯಕ್ಕೆ ಈ ಎರಡೂ ಸಂಸ್ಥೆಗಳು ಹುಬ್ಬಳ್ಳಿಯಿಂದ ವಿಮಾನಯಾನ ಆರಂಭಿಸದಿರಲು ನಿರ್ಧರಿಸಿವೆ.

‘ಏರ್‌ ಇಂಡಿಯಾ ಹಾಗೂ ಇಂಡಿಗೊ ಸಂಸ್ಥೆಗಳ ವಿಮಾನಗಳು ಮಾರ್ಚ್‌ 24ರಂದು ಕೊನೆಯ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದವು. ಕೊರೊನಾ ಸೋಂಕಿನ ಭೀತಿಯ ಕಾರಣಕ್ಕಾಗಿ ಎಲ್ಲಾ ವೇಳಾಪಟ್ಟಿಯನ್ನು ರದ್ದು ಮಾಡಲಾಗಿತ್ತು. ನಮ್ಮ ಸೇವೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಮೇಲಧಿಕಾರಿಗಳ ಸೂಚನೆ ಬರುವ ತನಕ ಕಾಯಬೇಕಿದೆ’ ಎಂದು ಆ ಸಂಸ್ಥೆಗಳ ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಏರ್‌ ಇಂಡಿಯಾದ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ ಜೂನ್‌ ಅಂತ್ಯದವರೆಗೂ ಹುಬ್ಬಳ್ಳಿಯಿಂದ ನಮ್ಮ ಸಂಸ್ಥೆಯ ವಿಮಾನ ಸೌಲಭ್ಯ ಆರಂಭವಾಗುವುದಿಲ್ಲ ಎಂದು ಹೇಳಿದರು.

ಸ್ಟಾರ್‌ ಏರ್‌ ಮೇ 25ರಿಂದ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ದೆಹಲಿಗೆ ವಿಮಾನ ಸೇವೆ ಆರಂಭಿಸಲಿದೆ. ಸರ್ಕಾರ ಹೊಸಮಾರ್ಗಸೂಚಿ ಪ್ರಕಟಿಸಿದ್ದು, ರಾತ್ರಿ ಪ್ರಯಾಣಕ್ಕೂ ಅವಕಾಶ ಕಲ್ಪಿಸಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.