ADVERTISEMENT

ರಾಜ್ಯಪಾಲರನ್ನು ಬಿಟ್ಟು ಹಾರಿದ ವಿಮಾನ: ಕ್ಷಮೆ ಯಾಚಿಸಿದ ಏರ್‌ಏಷ್ಯಾ

ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕಾಗಿ ರಾಜಭವನದಿಂದ ದೂರು ಸಲ್ಲಿಕೆ

ಪಿಟಿಐ
Published 29 ಜುಲೈ 2023, 3:35 IST
Last Updated 29 ಜುಲೈ 2023, 3:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಬಿಟ್ಟು  ವಿಮಾನ ಹಾರಿದ್ದ ಘಟನೆಗೆ ಸಂಬಂಧಿಸಿ ವಿಮಾನಯಾನ ಸಂಸ್ಥೆ ಏರ್‌ಏಷ್ಯಾ ಶುಕ್ರವಾರ ಕ್ಷಮೆ ಯಾಚಿಸಿದೆ.

‘ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಈ ಕುರಿತು ತನಿಖೆ ಕೈಗೊಂಡಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಹಿರಿಯ ಅಧಿಕಾರಿ ನೇತೃತ್ವದ ತಂಡ ರಾಜ್ಯಪಾಲರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ’ ಎಂದು ಸಂಸ್ಥೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ರಾಜ್ಯಪಾಲರ ಶಿಷ್ಟಾಚಾರ ಅಧಿಕಾರಿ ಎಂ.ವೇಣುಗೋಪಾಲ್ ಅವರು ವಿಮಾನನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಎಐಎಕ್ಸ್‌ ಕನೆಕ್ಟ್‌ ಎಂಬುದು ಏರ್‌ಇಂಡಿಯಾದ ಅಂಗಸಂಸ್ಥೆಯಾಗಿದ್ದು, ಏರ್‌ಏಷ್ಯಾ ಹೆಸರಿನಲ್ಲಿ ಏರ್‌ಏಷ್ಯಾ ಇಂಡಿಯಾ ಹೆಸರಿನಲ್ಲಿ ವಿಮಾನ ಸೇವೆ ಒದಗಿಸುತ್ತದೆ.

ಘಟನೆ ವಿವರ: ಅಧಿಕೃತ ಭೇಟಿಗಾಗಿ ಹೈದರಾಬಾದ್‌ಗೆ ಹೋಗಲು ರಾಜ್ಯಪಾಲ ಗೆಹಲೋತ್‌ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಗುರುವಾರ ತೆರಳಿದ್ದರು.

‘ಮಧ್ಯಾಹ್ನ 1.10ಕ್ಕೆ ರಾಜಭವನದಿಂದ ಹೊರಟಿದ್ದ ರಾಜ್ಯಪಾಲರು ಟರ್ಮಿನಲ್‌–1 ವಿಐಪಿ ಲಾಂಜ್‌ ಅನ್ನು 1.35ಕ್ಕೆ ತಲುಪಿದ್ದರು. ಅಷ್ಟರಲ್ಲಾಗಲೇ ಅವರ ಲಗೇಜುಗಳನ್ನು  ಟರ್ಮಿನಲ್‌–2ರಲ್ಲಿದ್ದ ವಿಮಾನದಲ್ಲಿ (ಐ5 972) ಇರಿಸಲಾಗಿತ್ತು. ಈ ವಿಮಾನ 2.05ಕ್ಕೆ ಹಾರಬೇಕಿತ್ತು’.

‘ರಾಜ್ಯಪಾಲರು 2.06ಕ್ಕೆ ವಿಮಾನ ಏರಲು ಅಳವಡಿಸಿದ್ದ ಏಣಿ ತಲುಪಿದ್ದರು. ಆದರೆ, ತಡವಾಗಿ ಬಂದಿದ್ದೀರಿ ಎಂಬ ಕಾರಣ ನೀಡಿದ ಏರ್‌ಏಷ್ಯಾ ಸಿಬ್ಬಂದಿ ಆರೀಫ್‌, ವಿಮಾನ ಏರಲು ರಾಜ್ಯಪಾಲರಿಗೆ ಅನುಮತಿ ನಿರಾಕರಿಸಿದರು’ ಎಂದು ವೇಣುಗೋಪಾಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ರಾಜ್ಯಪಾಲರು ಏಣಿ ಬಳಿ ಇದ್ದಾಗ ವಿಮಾನದ ಬಾಗಿಲು ಇನ್ನೂ ತೆರೆದೇ ಇತ್ತು. ಆದಾಗ್ಯೂ, ರಾಜ್ಯಪಾಲರನ್ನು ನಿರ್ಲಕ್ಷಿಸಿದ್ದಲ್ಲದೇ ವಿಮಾನ ಹತ್ತಲು ನಿರಾಕರಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ವಿಐಪಿ ಲಾಂಜ್‌ಗೆ ಮರಳಿದ ಗೆಹಲೋತ್‌ ಅವರು, 90 ನಿಮಿಷಗಳ ನಂತರ ಮತ್ತೊಂದು ವಿಮಾನದ ಮೂಲಕ ಹೈದರಾಬಾದ್‌ ತಲುಪಿದರು’ ಎಂದು ವಿವರಿಸಿದ್ದಾರೆ.

‘ಕರ್ನಾಟಕದ ಪ್ರಥಮ ಪ್ರಜೆಯಾಗಿರುವ ರಾಜ್ಯಪಾಲರಿಗೆ ಈ ಘಟನೆಯಿಂದಾಗಿ ನೋವಾಗಿದೆ. ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಐಎಕ್ಸ್‌ ಕನೆಕ್ಟ್‌ನ ನಿಲ್ದಾಣ ವ್ಯವಸ್ಥಾಪಕ ಝಿಕೊ ಸೋರೇಸ್ ಹಾಗೂ ಏರ್‌ಏಷ್ಯಾ ಸಿಬ್ಬಂದಿ ಆರೀಫ್‌ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ವೇಣುಗೋಪಾಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.