ADVERTISEMENT

ರಾಜ್ಯಕ್ಕೆ ನಾಲ್ಕು ‘ತೇಲುವ ಜೆಟ್ಟಿ’

ಸಾಗರಮಾಲಾ ಅಡಿಯಲ್ಲಿ ಕೇಂದ್ರದಿಂದ ಮಂಜೂರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:45 IST
Last Updated 9 ಮಾರ್ಚ್ 2023, 19:45 IST

ನವದೆಹಲಿ: ಪ್ರವಾಸೋದ್ಯಮ ಆರ್ಥಿಕತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ನಾಲ್ಕು ತೇಲುವ (ಫ್ಲೋಟಿಂಗ್‌) ಜೆಟ್ಟಿಗಳನ್ನು ಕೇಂದ್ರ ಸರ್ಕಾರ ಗುರುವಾರ ಮಂಜೂರು ಮಾಡಿದೆ.

ಸಾಗರಮಾಲಾ ಅಡಿಯಲ್ಲಿ ಸಚಿವಾಲಯವು 4 ಹೆಚ್ಚುವರಿ ಯೋಜನೆಗಳಿಗೆ ತಾತ್ವಿಕ ಅನುಮೋದನೆ ನೀಡಿದೆ. ಕರ್ನಾಟಕದಲ್ಲಿ ತೇಲುವ ಜೆಟ್ಟಿ ಯೋಜನೆಗಳ ಸಂಖ್ಯೆ 11ಕ್ಕೆ ತಲುಪಿದೆ. ಈ ಯೋಜನೆಗಳನ್ನು ಮುಖ್ಯವಾಗಿ ಗುರುಪುರ ನದಿ ಮತ್ತು ನೇತ್ರಾವತಿ ನದಿಗಳನ್ನು ಗುರಿಯಾಗಿಸಿಕೊಂಡು ಅನುಷ್ಠಾನ ಮಾಡಲಾಗುತ್ತದೆ. ಇವುಗಳನ್ನು ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಬಳಸಲಾಗುವುದು. ತಣ್ಣೀರುಬಾವಿ ಚರ್ಚ್, ಬಂಗ್ರಕೂಳೂರು, ಕೂಳೂರು ಸೇತುವೆ ಮತ್ತು ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಈ ಜೆಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಸಚಿವಾಲಯವು ಸಾಗರಮಾಲಾ ಯೋಜನೆಯಡಿ, ದೇಶದ ಸಾಮಾಜಿಕ-ಆರ್ಥಿಕ ಮತ್ತು ನಿಯಂತ್ರಕ ಪರಿಸರ ಬಲಪಡಿಸಲು ಕಡಲ ಉದ್ಯಮದಲ್ಲಿ ಹಲವಾರು ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಕೈಗೊಂಡಿದೆ. ತೇಲುವ ಜೆಟ್ಟಿ ಪರಿಸರ ವ್ಯವಸ್ಥೆಯ ವಿಶಿಷ್ಟ ಮತ್ತು ನವೀನ ಪರಿಕಲ್ಪನೆಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದು ಸಾಂಪ್ರದಾಯಿಕ ಸ್ಥಿರ ಜೆಟ್ಟಿಗಳಿಗೆ ಹೋಲಿಸಿದರೆ, ಪರಿಸರ ಸ್ನೇಹಿಯಾಗಿದ್ದು, ದೀರ್ಘ ಬಾಳಿಕೆ ಮತ್ತು ಮಾಡ್ಯುಲರ್ ನಿರ್ಮಾಣದಂತಹ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಕೇಂದ್ರವು ಈ ಯೋಜನೆಗಾಗಿ ಈಗಾಗಲೇ ಶೇ 100 ಅನುದಾನ (₹26 ಕೋಟಿ) ಮಂಜೂರು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಮಿಳುನಾಡಿನಲ್ಲಿ ಸಹ ನಾಲ್ಕು ತೇಲುವ ಜೆಟ್ಟಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳು ಪ್ರವಾಸಿಗರಿಗೆ ಸುರಕ್ಷಿತ, ತೊಂದರೆ-ರಹಿತ ಸಾರಿಗೆ ಒದಗಿಸಲು ಸಹಾಯ ಮಾಡುವುದಲ್ಲದೆ, ಕರಾವಳಿ ಸಮುದಾಯದ ಒಟ್ಟಾರೆ ಅಭಿವೃದ್ಧಿ ಮತ್ತು ಉನ್ನತಿಗೆ ಕಾರಣವಾಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

‘ಈ ಯೋಜನೆಯು ಅಭಿವೃದ್ಧಿ ಹೊಂದಿದ ದೇಶ ನಿರ್ಮಿಸಲು ಅವಶ್ಯಕ. ಈ ಜೆಟ್ಟಿಗಳ ಸ್ಥಾಪನೆಯು ಕರ್ನಾಟಕ ಮತ್ತು ತಮಿಳುನಾಡಿನ ಈ ಪ್ರದೇಶಗಳ ಸಾಮಾಜಿಕ– ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ನೀಡಲಿದೆ. ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳೊಂದಿಗೆ ಜಲ ಸಂಬಂಧಿತ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವ್ಯಾಪಾರಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.