ADVERTISEMENT

ಅತಿವೃಷ್ಟಿ: 14, 15ಕ್ಕೆ ಕೇಂದ್ರ ತಂಡದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 7:07 IST
Last Updated 13 ಡಿಸೆಂಬರ್ 2020, 7:07 IST

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಜಂಟಿ ಕಾರ್ಯದರ್ಶಿ ರಮೇಶಕುಮಾರ್‌ ಘಂಟ ನೇತೃತ್ವದ ಆರು ಮಂದಿಯ ತಂಡ ಇದೇ 14, 15ರಂದು ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ.

ದೆಹಲಿಯಿಂದ ಭಾನುವಾರ ಬರಲಿರುವ ತಂಡ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜತೆ ಸಂಜೆ ಚರ್ಚೆ ನಡೆಸಲಿದೆ. ಬಳಿಕ ತಲಾ ಇಬ್ಬರನ್ನು ಒಳಗೊಂಡ ಮೂರು ತಂಡ ಪ್ರವಾಹಪೀಡಿತ ಜಿಲ್ಲೆಗಳಿಗೆ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಲಿದೆ. ಮಂಗಳವಾರ ಸಂಜೆ ಮತ್ತೆ ಮುಖ್ಯಮಂತ್ರಿ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಬುಧವಾರ ದೆಹಲಿಗೆ ಮರಳಲಿದೆ.

ರಮೇಶ್‌ಕುಮಾರ್‌ ಘಂಟ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕ ಅಮಿತ್‌ಕುಮಾರ್‌ ನೇತೃತ್ವದ ತಂಡ ಕಲಬುರ್ಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಲಿದೆ.

ADVERTISEMENT

ಕೇಂದ್ರ ಎಣ್ಣೆ ಬೀಜ ಮತ್ತು ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಮನೋಹರನ್‌ ಮತ್ತು ಜಲ ಶಕ್ತಿ ವಿಭಾಗದ ಸೂಪರಿಟೆಂಡೆಂಟ್ ಎಂಜಿನಿಯರ್‌ ಗುರುಪ್ರಸಾದ್‌ ನೇತೃತ್ವದ ತಂಡ ವಿಜಯಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಭೂ ಸಾರಿಗೆ ಮತ್ತು ಹೆದ್ದಾರಿ ವಿಭಾಗದಸೂಪರಿಂಟೆಂಡೆಂಟ್ ಎಂಜಿನಿಯರ್‌ ಸದಾನಂದಬಾಬು ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಆರ್‌ಡಿಪಿಆರ್‌ ವಿಭಾಗದ ಅಧೀನ ಕಾರ್ಯದರ್ಶಿ ರಾಜುವೇದಿ ಅವರನ್ನು ಒಳಗೊಂಡ ತಂಡ ಉಡುಪಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.