ADVERTISEMENT

ಸಚಿವರೊಂದಿಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರ ಪ್ರವಾಸ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:00 IST
Last Updated 22 ಆಗಸ್ಟ್ 2019, 20:00 IST
ಎಚ್.ಕೆ. ಕುಮಾರಸ್ವಾಮಿ,
ಎಚ್.ಕೆ. ಕುಮಾರಸ್ವಾಮಿ,   

ಸಕಲೇಶಪುರ (ಹಾಸನ ಜಿಲ್ಲೆ): ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಸಚಿವರಾದ ಮಾಧುಸ್ವಾಮಿ, ಸಿ.ಟಿ.ರವಿ ಅವರೊಂದಿಗೆ ಒಂದೇ ಕಾರಿನಲ್ಲಿ ಕುಳಿತು ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.

ಮೂಡಿಗೆರೆ ತಾಲ್ಲೂಕಿನಿಂದ ಬೆಳಿಗ್ಗೆ ಹುರುಡಿ ಗ್ರಾಮಕ್ಕೆ ಬಂದ ಸಚಿವರ ತಂಡವನ್ನು ಕುಮಾರಸ್ವಾಮಿ ಹಾರ ಹಾಕಿ ಸ್ವಾಗತಿಸಿದರು. ನಂತರ ಸಚಿವರ ಕಾರಿನಲ್ಲಿಯೇ ಕುಳಿತು ಪ್ರಯಾಣಿಸಿದರು.

ಈ ಹಿಂದೆ ಬಿಜೆಪಿಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೈರಾಗುತ್ತಿದ್ದುದೇ ಹೆಚ್ಚು. ಆ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳನ್ನು ಕೂಡ ಹತ್ತಿರಕ್ಕೆ ಸೇರಿಸಿಕೊಳ್ಳದ ಅವರ ಇಂದಿನ ನಡೆ ಎಲ್ಲರ ಹುಬ್ಬೇರುವಂತೆ ಮಾಡಿತು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಸಚಿವರನ್ನು ಖುದ್ದು ಕರೆದುಕೊಂಡು ಹೋಗಿ ಸಮಸ್ಯೆಯ ಗಂಭೀರತೆ ಮನವರಿಕೆ ಇದು ಅನಿವಾರ್ಯ’ ಎಂದರು.

ಜ್ಞಾನೇಂದ್ರ ಅಸಮಾಧಾನ

ಶಿವಮೊಗ್ಗ: ‘ಬಿ‌.ಎಸ್‌‌.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಮಧ್ಯೆ ಬೆಳೆದವನು ನಾನು. ನಾಲ್ಕು ಬಾರಿ ಶಾಸಕನಾದ ನನಗೆ ಸಚಿವ ಸ್ಥಾನ ಸಿಗಬೇಕಿತ್ತು’ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಸಮಾಧಾನ ಹೊರಹಾಕಿದರು.

ನಗರದಲ್ಲಿ ಗುರುವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಹಿರಿಯರು ನಮ್ಮ ಕೆಲಸ ನೋಡಿ ಸ್ಥಾನಮಾನ ನೀಡಬೇಕಿತ್ತು. ಯಡಿಯೂರಪ್ಪ ಅವರಾದರೂ ತಿಳಿದುಕೊಂಡು ಅವಕಾಶ ನೀಡಬೇಕಿತ್ತು. ಅದೆಲ್ಲ ಕೇಳಿ ಪಡೆಯುವುದಲ್ಲ’ ಎಂದರು.

‘ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರವಾಗಿರುವುದು ನಿಜ. ಹಾಗಂತ ಪಕ್ಷದ ವಿರುದ್ಧ ನಿಲ್ಲುವುದಿಲ್ಲ. ಲಾಬಿ ಮಾಡುವುದಿಲ್ಲ. ಮೊದಲಿನಿಂದಲೂ ಪಕ್ಷಕ್ಕೆ ನಿಷ್ಠನಾಗಿ ಇದ್ದೇನೆ‌. ಮುಂದೆಯೂ ಪಕ್ಷಕ್ಕೆ ದುಡಿಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.