ADVERTISEMENT

ರಂಗನತಿಟ್ಟಿನ 10 ನಡುಗಡ್ಡೆಗಳಿಗೆ ಹಾನಿ!

ಕಾವೇರಿ ಪ್ರವಾಹ: ₹1 ಕೋಟಿಗೂ ಹೆಚ್ಚು ನಷ್ಟ l ನವೆಂಬರ್‌ನಲ್ಲಿ ನಡುಗಡ್ಡೆ ಅಭಿವೃದ್ಧಿ ಕಾರ್ಯ

ಗಣಂಗೂರು ನಂಜೇಗೌಡ
Published 23 ಆಗಸ್ಟ್ 2019, 20:15 IST
Last Updated 23 ಆಗಸ್ಟ್ 2019, 20:15 IST
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಓಪನ್ ಬಿಲ್ (ಬಾಯ್ಕಳಕ ಪಕ್ಷಿ) ನಡುಗಡ್ಡೆ ಸಂಪೂರ್ಣ ನಾಶವಾಗಿದೆ
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದ ಓಪನ್ ಬಿಲ್ (ಬಾಯ್ಕಳಕ ಪಕ್ಷಿ) ನಡುಗಡ್ಡೆ ಸಂಪೂರ್ಣ ನಾಶವಾಗಿದೆ   

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಈಚೆಗೆ 1.62 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಕಾವೇರಿ ನದಿಗೆ ಹರಿಸಿದ ಪರಿಣಾಮ, ಜಲಾಶಯದ ತಗ್ಗಿನಲ್ಲಿರುವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದ 10 ನಡುಗಡ್ಡೆಗಳಿಗೆ ಹಾನಿಯಾಗಿದೆ.

18 ನಡುಗಡ್ಡೆಗಳ ಪೈಕಿ, ಓಪನ್ ಬಿಲ್ (ಬಾಯ್ಕಳಕ), ಸ್ಟೋನ್ ಫ್ಲವರ್ ಮತ್ತು ಲಾರ್ಜ್‌ ಕಾರ್ಮೊರೆಂಟ್‌ ದ್ವೀಪಗಳು ಸಂಪೂರ್ಣ ನಾಶವಾಗಿವೆ. ಸ್ಪೂನ್‌ಬಿಲ್‌, ರೇನ್ ಟ್ರೀ, ಎರಡನೇ ಸ್ಟೋನ್ ಫ್ಲವರ್, ನೀರಂಜಿ ಐಲ್ಯಾಂಡ್, ಪರ್ಪಲ್ ಹೆರಾನ್ ದ್ವೀಪ ಹಾಗೂ ಕಾಡು ಹುಣಸೆ ನಡುಗಡ್ಡೆಗಳು ಭಾಗಶಃ ಹಾಳಾಗಿವೆ.

ಸತತ ಮೂರು ದಿನಗಳ ದೊಡ್ಡ ಪ್ರವಾಹಕ್ಕೆ ನಡುಗಡ್ಡೆಗಳ ತಳವೇ ಕಾಣೆಯಾಗಿದ್ದು, ಮರಗಳು ಕೊಚ್ಚಿಹೋಗಿವೆ. ಕೆಲವು ಮರಗಳು ನೀರಿಗೆ ಬಿದ್ದಿವೆ. ಪಕ್ಷಿಧಾಮದಲ್ಲಿರುವ ಮಾರ್ಷಲ್‌ ಜಾತಿಯ ವಯಸ್ಕ ಮೊಸಳೆಗಳು ದಡ ಹತ್ತಿದ್ದು, ಮರಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದಲ್ಲಿ ಮೊಟ್ಟೆ ಮತ್ತು ಮರಿಗಳನ್ನು ಕಳೆದುಕೊಂಡ ಐಬಿಸ್ ಜಾತಿಯ ಹಕ್ಕಿಗಳು ಮತ್ತೆ ಗೂಡು ಕಟ್ಟುವ ಕಾಯಕದಲ್ಲಿ ತೊಡಗಿದ್ದ ದೃಶ್ಯ ಶುಕ್ರವಾರ ಕಂಡುಬಂತು.

ADVERTISEMENT

25 ವರ್ಷಗಳಿಂದ ಆಗಾಗ್ಗೆ ಅಭಿವೃದ್ಧಿ ಕಂಡಿದ್ದ, ಪಕ್ಷಿ ಸಂಕುಲದ ವಂಶಾಭಿವೃದ್ಧಿಗೆ ಪೂರಕವಾಗಿದ್ದ ನಡುಗಡ್ಡೆಗಳು ನಾಶವಾಗಿರುವುದರಿಂದ ಸುಮಾರು ₹1 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಪಕ್ಷಿಧಾಮವನ್ನು ಯಥಾಸ್ಥಿತಿಗೆ ತರಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ಪಕ್ಷಿಧಾಮದ ಹಿರಿಯ ಸಿಬ್ಬಂದಿ ಹೇಳುತ್ತಾರೆ.

ನದಿಯಲ್ಲಿ ಪ್ರವಾಹ ಸಂಪೂರ್ಣ ನಿಂತ ಬಳಿಕವಷ್ಟೇ ನಷ್ಟದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ನಾಶವಾಗಿರುವ ನಡುಗಡ್ಡೆಗಳ ಅಭಿವೃದ್ಧಿ ಕಾರ್ಯವನ್ನು ನವೆಂಬರ್ ನಂತರ ಆರಂಭಿಸಲಾಗುತ್ತದೆ. ಪಕ್ಷಿಧಾಮ ಮೂಲ ಸ್ವರೂಪಕ್ಕೆ ಬರಬೇಕಾದರೆ ದ್ವೀಪಗಳ ಅಭಿವೃದ್ಧಿ ಆಗಲೇಬೇಕು ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.