ADVERTISEMENT

ಕೊಡಗು: ಎರಡು ಗ್ರಾಮಗಳ 200 ಕುಟುಂಬಗಳ ಸ್ಥಳಾಂತರ

ನೆಲ್ಯಹುದಿಕೇರಿ, ಕುಂಬಾರಗುಡಿ, ಕುಶಾಲನಗರದಲ್ಲಿ ಪರಿಸ್ಥಿತಿ ಅವಲೋಕಿಸಿದ ಸಚಿವರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:07 IST
Last Updated 21 ಆಗಸ್ಟ್ 2019, 13:07 IST
ಸಿದ್ದಾಪುರ ಸಮೀಪದ ಕುಂಬಾರಗುಡಿಯಲ್ಲಿ ಮನೆ ಕಳೆದುಕೊಂಡವರ ಸಮಸ್ಯೆ ಆಲಿಸಿದ ಸಚಿವ ಎಸ್‌. ಸುರೇಶ್‌ ಕುಮಾರ್‌
ಸಿದ್ದಾಪುರ ಸಮೀಪದ ಕುಂಬಾರಗುಡಿಯಲ್ಲಿ ಮನೆ ಕಳೆದುಕೊಂಡವರ ಸಮಸ್ಯೆ ಆಲಿಸಿದ ಸಚಿವ ಎಸ್‌. ಸುರೇಶ್‌ ಕುಮಾರ್‌   

ಮಡಿಕೇರಿ: ಕಾವೇರಿ ನದಿ ತೀರದಲ್ಲಿರುವ ಎರಡು ಗ್ರಾಮಗಳ 200 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಸ್‌.ಸುರೇಶ್ ಕುಮಾರ್ ಹೇಳಿದರು.

ಪ್ರವಾಹಪೀಡಿತ ಕುಂಬಾರಗುಡಿ ಹಾಗೂ ಕರಡಿಗೋಡು ಗ್ರಾಮಗಳ ಸಂತ್ರಸ್ತರ ಸಮಸ್ಯೆ ಆಲಿಸಿದ ನಂತರ ಮಾತನಾಡಿ, ‘ನಿರಾಶ್ರಿತರಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಸರ್ಕಾರಿ ಅಥವಾ ಖಾಸಗಿ ಜಾಗವನ್ನು ಪರಿಶೀಲಿಸಿ ಸುರಕ್ಷಿತ ಜಾಗದಲ್ಲಿ ನಿರಾಶ್ರಿತರಿಗೆ ಮನೆ ಕಟ್ಟಿ ಕೊಡಲಾಗುವುದು. ಕೆಲವು ಕಡೆ ಗ್ರಾಮಸಭೆಯಲ್ಲಿ ಈ ಹಿಂದೆಯೇ ಸ್ಥಳಾಂತರಕ್ಕೆ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಕಾರಣಾಂತರಿಂದ ಸಾಧ್ಯವಾಗಿರಲಿಲ್ಲ. ನದಿ ಪಾತ್ರದಲ್ಲಿ ಅಪಾಯ ಸ್ಥಳದಲ್ಲಿ ವಾಸವಿದ್ದ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಕಳೆದ ವರ್ಷಕ್ಕಿಂತ ಈ ಬಾರಿಯ ಪ್ರವಾಹ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ವರ್ಷ ಭೂಕುಸಿತ ಉಂಟಾಗಿತ್ತು. ಈ ಬಾರಿ ಕಾವೇರಿ ನದಿಯೇ ಉಕ್ಕೇರಿದೆ ಎಂದು ವಿವರಿಸಿದರು.

‘ಮನೆ ಕಟ್ಟಲು ₹5 ಲಕ್ಷ ಮತ್ತು ತಕ್ಷಣದ ಪರಿಹಾರವಾಗಿ ₹10 ಸಾವಿರ ನೀಡಲಾಗಿದೆ. ಅಂದಾಜು ₹40 ಸಾವಿರ ಕೋಟಿ ನಷ್ಟವಾಗಿದ್ದು, ಕೇಂದ್ರದಿಂದ ₹10 ಸಾವಿರ ಕೋಟಿ ಅನುದಾನ ನಿರೀಕ್ಷೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಪರಿಹಾರ ಕೇಂದ್ರದಲ್ಲಿ ಇದ್ದವರಿಗೆ ₹10 ಸಾವಿರ ಪರಿಹಾರ ಹಣ ತಲುಪಿದೆ. ಪರಿಹಾರ ಕೇಂದ್ರ ಬಿಟ್ಟವರಿಗೂ ಎರಡು ದಿನಗಳಲ್ಲಿ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೊಡಗು ಜಿಲ್ಲೆಯ ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಲಾಗುವುದು ಎಂದು ಹೇಳಿದರು.

‘ಒಬ್ಬೊಬ್ಬ ಸಚಿವರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ. ತನ್ನನ್ನು ಕೊಡಗು ಜಿಲ್ಲೆಗೆ ನಿಯೋಜಿಸಲಾಗಿದೆ. ಆದ್ದರಿಂದ, ಎರಡು ದಿನ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜಿಲ್ಲೆಯ ‍ಪರಿಸ್ಥಿತಿ ಅವಲೋಕಿಸಿ ಮುಖ್ಯಮಂತ್ರಿಗೆ ವರದಿ ನೀಡುತ್ತೇನೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಜಿ.ಪಂ ಸಿಇಒ ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.