ADVERTISEMENT

ಪ್ರವಾಹ ಪರಿಹಾರ: ಕೇಂದ್ರದ ಭರವಸೆ

ನೆರವಿಗಾಗಿ ಮತ್ತೆ ಮನವಿ ಸಲ್ಲಿಸಿದ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 19:16 IST
Last Updated 5 ಅಕ್ಟೋಬರ್ 2018, 19:16 IST

ನವದೆಹಲಿ: ಕೊಡಗು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಪುನರ್ವಸತಿ ಕಲ್ಪಿಸಲು ಹಾಗೂ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ಅನುದಾನ ಒದಗಿಸುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ.

ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ ಅವರು ಮಾತನಾ
ಡಿದರು. ಕೊಡಗು ಮತ್ತು ಕರಾವಳಿ ಭಾಗದಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟದ ಕುರಿತು ಕುರಿತು ಕೇಂದ್ರದ ಅಧ್ಯಯನ ತಂಡ ವರದಿ ಸಲ್ಲಿಸಿದ್ದು, ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಭಾರಿ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಜನ ಮನೆ ಕಳೆದುಕೊಂಡು ಬೀದಿಪಾಲಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಬೇಕಿದೆ. ಎಂಟು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಒಟ್ಟು ₹ 3,436 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾನಿ ವಿವರ ನೀಡಿದರು.

ADVERTISEMENT

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಈ ಸಂದರ್ಭ ಹಾಜರಿದ್ದರು.

ಮೇಕೆದಾಟು; ಸಭೆಗೆ ಆಗ್ರಹ:ಕೇಂದ್ರದ ಜಲಸಂಪನ್ಮೂಲ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ನೇತೃತ್ವದ ನಿಯೋಗವು, ಮೇಕೆದಾಟು ಯೋಜನೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳೊಂದಿಗೆ ಸಭೆ ಆಯೋಜಿಸುವಂತೆ ಆಗ್ರಹಿಸಿತು.

ಮಹದಾಯಿ ಜಲವಿವಾದ ನ್ಯಾಯಮಂಡಳಿ ತನ್ನ ಐತೀರ್ಪು ನೀಡಿರುವುದರಿಂದ ಕೂಡಲೇ ಅಧಿಸೂಚನೆ ಹೊರಡಿಸಿ ಯೋಜನೆ ಕೈಗೆತ್ತಿಕೊಳ್ಳಲು ಅನುವು ಮಾಡಿಕೊಡುವಂತೆಯೂ ಕೋರಲಾಯಿತು.

ಪ್ರವಾಹಪೀಡಿತ ಪ್ರದೇಶದಲ್ಲಿ ರಸ್ತೆಗಳೂ ಹದಗೆಟ್ಟಿದ್ದು, ಜನರ ಆಸ್ತಿಪಾಸ್ತಿಗೂ ಸಾಕಷ್ಟು ಹಾನಿ ಉಂಟಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ₹ 250 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಯಿತು.

‘ಸಾಲಮನ್ನಾ: ಮಾಹಿತಿಗೆ ಕಾಲಮಿತಿ ಇಲ್ಲ’

ಸಾಲ ಮನ್ನಾ ಯೋಜನೆಯ ಲಾಭ ಪಡೆಯುವ ನಿಟ್ಟಿನಲ್ಲಿ ರೈತರಿಂದ ಮಾಹಿತಿ ಕೋರಲಾಗಿದ್ದು, ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ರೈತರು ಆತಂಕಪಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಾಲಮನ್ನಾ ಯೋಜನೆಗಾಗಿ ರೈತರು ದಾಖಲೆಸಮೇತ ಮಾಹಿತಿ ಒದಗಿಸಲು ಕಾಲಮಿತಿ ಹೇರಲಾಗಿದೆ ಎಂಬ ವದಂತಿ ಹರಡಿದೆ. ರೈತರು ಅದಕ್ಕೆ ಕಿವಿಗೊಡದೇ ನಾಡಕಚೇರಿಗೆ ತೆರಳಿ ಅರ್ಜಿ ಭರ್ತಿ ಮಾಡಿ ಮಾಹಿತಿ ಒದಗಿಸಬೇಕು ಎಂದು ಅವರು ಕೋರಿದರು.

ಖಾಸಗಿ ಲೇವಾದೇವಿ ವ್ಯವಹಾರ ನಡೆಸುವವರಿಂದ ಬಡಜನರು ಪಡೆದ ಸಾಲವನ್ನೂ ಮನ್ನಾ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಋಣಮುಕ್ತ ಕಾಯ್ದೆ ಕುರಿತು ಕೇಂದ್ರದ ಕಾನೂನು ಸಚಿವಾಲಯಕ್ಕೆ ಸ್ವಷ್ಟನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

* ಖಾಸಗಿಯವರಿಂದ ಸಾಲ ಪಡೆದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲೆಂದೇ ಋಣ ಮುಕ್ತ ಕಾಯ್ದೆ ಜಾರಿಗೊಳಿಸಲಾಗಿದೆ

-ಎಚ್‌.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

ಮುಖ್ಯಾಂಶಗಳು

* ರಾಜನಾಥ್‌, ಗಡ್ಕರಿ ಭೇಟಿ ಮಾಡಿದ ಸಿ.ಎಂ

* ಎಚ್‌.ಡಿ. ದೇವೇಗೌಡ, ರೇವಣ್ಣ ಸಾಥ್‌

* ಮಹದಾಯಿ ಯೋಜನೆ ಕುರಿತೂ ಚರ್ಚೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.