ಬೆಂಗಳೂರು: ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೂರಿದ್ದರ ಕುರಿತು ಆ ಭಾಗದ ಸಚಿವರನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಎಕ್ಸ್‌ನಲ್ಲಿ ಜೆಡಿಎಸ್ ಟ್ವೀಟ್ ಮಾಡಿ, ಉತ್ತರ ಕರ್ನಾಟಕ ಭಾಗದ ಉಸ್ತುವಾರಿ ಸಚಿವರೇ ಎಲ್ಲಿದ್ದೀರಿ? ಎಲ್ಲಿ ಮಾಯಾವಾಗಿದ್ದೀರಿ? ಎಂದು ಪ್ರಶ್ನಿಸಿದೆ.
ಭೀಮಾ ನದಿಯ ಪ್ರವಾಹಕ್ಕೆ ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಹಲವು ಜಿಲ್ಲೆಯಲ್ಲಿ ಸಾವು ನೋವುಗಳಾಗಿವೆ. ನೆರೆಯಿಂದ ಗ್ರಾಮಗಳಿಗೆ ಗ್ರಾಮಗಳೇ ಮುಳುಗಡೆ ಆಗಿವೆ. ರಸ್ತೆ, ಸೇತುವೆಗಳು ಮುಳುಗಿವೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಉಸ್ತುವಾರಿ ಮಂತ್ರಿಗಳ ಪತ್ತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಿಮ್ಮ ಜಿಲ್ಲೆಗಳು ಸಂಪೂರ್ಣ ಮುಳುಗಿರುವಾಗ ಎಲ್ಲಿ ಓಡಿ ಹೋಗಿದ್ದೀರಿ ? ಜನರ ದುಃಖ, ಆರ್ತನಾದ ನಿಮಗೆ ಕೇಳುತ್ತಿಲ್ಲವೇ? ನೆರೆ ಸಂತ್ರಸ್ತರಿಗೆ ಆಶ್ರಯ ಕೇಂದ್ರಗಳನ್ನು ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಿ, ನೆರೆ ಹಾನಿಯಿಂದ ನಷ್ಟಕ್ಕೊಳಗಾದವರಿಗೆ ತ್ವರಿತವಾಗಿ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.