ಬೆಂಗಳೂರು: ‘ಆನ್‌ಲೈನ್ ಮೂಲಕ ಆಹಾರ ಪದಾರ್ಥ ಪೂರೈಸುವ ಸ್ವಿಗ್ಗಿ, ಜೊಮಾಟೊ ಕಂಪನಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕಾಗುತ್ತದೆ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಕಂಪನಿಗಳು ಗ್ರಾಹಕರಿಗೆ ಸೇವೆ ನೀಡುವ ವೇಳೆ ನಿರ್ಲಕ್ಷ್ಯ ವಹಿಸುತ್ತಿರುವ ಮತ್ತು ತಂತ್ರಜ್ಞಾನ ಬಳಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳು ಬರುತ್ತಿವೆ’ ಎಂದಿದ್ದಾರೆ.
‘ತಮ್ಮ ಸೇವಾ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ಈ ಕಂಪನಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ, ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಕೊಡುವ ಭರವಸೆಗಳಿಗೆ ಪೂರವಾಗಿ ಸ್ಪಂದಿಸಬೇಕು. ಈ ವಿಚಾರಗಳಿಗೆ ಸಂಬಂಧಿಸಿದಂತೆ ಕಂಪನಿಗಳ ಜೊತೆ ಚರ್ಚೆ ನಡೆಸಲು ಯಾವುದೇ ಸಮಸ್ಯೆಗಳಿಲ್ಲ’ ಎಂದಿದ್ದಾರೆ.
‘ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನ ಬಳಕೆಯಿಂದ ಕೆಲವು ಸಮಸ್ಯೆಗಳನ್ನು ನಿಭಾಯಿಸಬಹುದು. ಆದರೆ, ನಿಜವಾದ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ತಂತ್ರಜ್ಞಾನ ವಿಫಲವಾಗುತ್ತಿದೆ. ಸ್ವಿಗ್ಗಿ, ಜೊಮಾಟೊ ಸೇರಿದಂತೆ ಇತರ ತ್ವರಿತ ವಾಣಿಜ್ಯ ಮತ್ತು ಇ-ಕಾಮರ್ಸ್ ವೇದಿಕೆಗಳು ತಮ್ಮ ಗ್ರಾಹಕ ಸೇವೆಯನ್ನು ಸುಧಾರಿಸಿಕೊಳ್ಳದಿದ್ದರೆ, ಉತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ನಿಯಮಗಳನ್ನು ರೂಪಿಸಬೇಕಾದೀತು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.