ADVERTISEMENT

ಯೋಜನೇತರ ಉದ್ದೇಶಕ್ಕೆ ಸ್ವೇಚ್ಛಾಚಾರದಿಂದ ಹಣ ಖರ್ಚು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 14:08 IST
Last Updated 4 ಡಿಸೆಂಬರ್ 2020, 14:08 IST
   

ಮಂಡ್ಯ: ‘ಬಜೆಟ್‌ ಘೋಷಣೆಗಳನ್ನು ಪಕ್ಕಕ್ಕಿಟ್ಟು ಯೋಜನೇತರ ಉದ್ದೇಶಕ್ಕೆ ಸ್ವೇಚ್ಛಾಚಾರದಿಂದ ಹಣ ಖರ್ಚು ಮಾಡಲಾಗುತ್ತಿದೆ. ಈ ಬಗ್ಗೆ ದಾಖಲಾತಿ ಸಂಗ್ರಹ ಮಾಡುತ್ತಿದ್ದು ಸೂಕ್ತ ಸಮಯದಲ್ಲಿ ವಿವರ ನೀಡುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಹೇಳಿದರು.

‘ಕಾನೂನುಬಾಹಿರ ಕೆಲಸಗಳ ಮೇಲೆ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಸ್ವರಾಜ್‌ ಯಾತ್ರೆ ಮಾಡಲಾಗುತ್ತಿದ್ದು ಪ್ರತಿ ತಾಲ್ಲೂಕಿಗೆ 3–4 ಮಂತ್ರಿಗಳು ತೆರಳಿ ಭಾಷಣ ಮಾಡುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ರೈತರ ಕಷ್ಟ ಕೇಳಿದ್ದೀರಾ, ಬೆಳೆ, ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿದ್ದೀರಾ, ಕನಿಷ್ಠ ಒಂದು ಟಾರ್ಪಲ್‌ ಕೊಡಿಸುವ ಯೋಗ್ಯತೆ ನಿಮಗಿಲ್ಲವೇ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಪ್ರತಿ ಗ್ರಾ.ಪಂಗೆ ವರ್ಷಕ್ಕೆ ₹ 1.50 ಕೋಟಿ ಕೊಡುವುದಾಗಿ ಉಪ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ ಬಿಜೆಪಿ ಅಧ್ಯಕ್ಷರು ₹ 1 ಕೋಟಿ ಎಂದು ಹೇಳುತ್ತಿದ್ದಾರೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ಸರ್ಕಾರ ನಡೆಯುತ್ತಿರುವ ದಾರಿ; ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತಾಗಿದೆ. ಗ್ರಾ.ಪಂ ಚುನಾವಣಾ ಅಭ್ಯರ್ಥಿಗಳನ್ನು ಹರಾಜು ಹಾಕುವ ಅಪಾಯವಿದೆ’ ಎಂದರು.

ADVERTISEMENT

‘ರೈತರನ್ನು ಹೇಡಿ ಎನ್ನುವ ಕೃಷಿ ಸಚಿವರನ್ನು ಪಡೆದ ರೈತರೇ ಧನ್ಯರು. ರೈತ ಹೇಡಿ ಆಗದಿರಲು 16 ತಿಂಗಳಿಂದ ನೀವೇನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಮಾತಿಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎನ್ನುತ್ತಾರೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೀವು ಮಾಡಿಕೊಂಡಿರುವುದು ಏನು? ನಾವೂ ಉಳಿಯಬೇಕಲ್ಲವೇ, ನಾವೂ ರಾಜಕೀಯ ಶಕ್ತಿ ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೇವೆ. ಅದಕ್ಕೆ ಸಿದ್ದರಾಮಯ್ಯ ಅವರಿಗೆ ಅರ್ಜಿ ಹಾಕುವ ಅಗತ್ಯವಿಲ್ಲ’ ಎಂದರು.

ಗೆಲ್ಲುವ ತಂತ್ರ: ಬಿಜೆಪಿಯಿಂದ ಪಾಠ ಕಲಿಯಬೇಕು
‘ಬಿಜೆಪಿ ಮುಖಂಡರು ಚುನಾವಣಾ ಪರಿಣತರಾಗಿದ್ದಾರೆ. ಗೆಲ್ಲುವ ತಂತ್ರಗಳ ಬಗ್ಗೆ ನಾವು ಅವರಿಂದ ಪಾಠ ಕಲಿಯುವ ಅನಿವಾರ್ಯತೆ ಎದುರಾಗಿದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಬಸವಕಲ್ಯಾಣ, ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ವೈಯಕ್ತಿಕವಾಗಿ ನನಗಿಷ್ಟವಿಲ್ಲ. ಆದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಬಸವಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ ಮೂರು ಬಾರಿ ಗೆದ್ದಿದ್ದರು, ಮಸ್ಕಿಯಲ್ಲಿ ಉತ್ತಮ ಮತ ಗಳಿಸಿದ್ದರು. ಜೆಡಿಎಸ್‌ಗೆ ಅಸ್ಥಿತ್ವವಿಲ್ಲ ಎಂಬ ಆರೋಪವನ್ನು ಒಪ್ಪುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.