ADVERTISEMENT

ಮತ್ತಷ್ಟು ಹಿಗ್ಗಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನ

ಹೆದ್ದಾರಿಯಲ್ಲಿ ವಾಹನ ನಿಯಂತ್ರಣಕ್ಕೆ ‘ವಿಶೇಷ ತಂಡ’ ರಚನೆ: ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧ ಸಾಧ್ಯತೆ?

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 13:58 IST
Last Updated 24 ಆಗಸ್ಟ್ 2019, 13:58 IST
ಗೋಣಿಕೊಪ್ಪಲು ಬಳಿಯ ಆನೆಚೌಕೂರು ಅರಣ್ಯ ಗೇಟ್
ಗೋಣಿಕೊಪ್ಪಲು ಬಳಿಯ ಆನೆಚೌಕೂರು ಅರಣ್ಯ ಗೇಟ್   

ಗೋಣಿಕೊಪ್ಪಲು (ಕೊಡಗು): ಹುಲಿ ಸಂರಕ್ಷಣಾ ಕೇಂದ್ರವಾದ ‘ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ’ದ ವನ್ಯಜೀವಿ ವಿಭಾಗವು ತನ್ನ ಅರಣ್ಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡಿದೆ.

ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ವನ್ಯಜೀವಿಗಳ ಸಂಖ್ಯೆ ವೃದ್ಧಿಸಿರುವುದರಿಂದ ಅವುಗಳ ಓಡಾಟಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಲು ಈಗ ಅರಣ್ಯ ಇಲಾಖೆ ಹಲವು ರೀತಿಯ ಕ್ರಮ ಕೈಗೊಂಡಿದೆ.

ಈಗಿದ್ದ 647 ಕಿ.ಮೀ ವ್ಯಾಪ್ತಿಗೆ ಹೊಸದಾಗಿ 200 ಚದರ ಕಿ.ಮೀ ಮೀಟರ್ ಅರಣ್ಯವನ್ನು ಸೇರಿಸಿ, ಒಟ್ಟು 847 ಚದರ ಕಿ.ಮೀ ವ್ಯಾಪ್ತಿಯಲ್ಲಿ ವನ್ಯಜೀವಿಗಳ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಗೆ ಈಗ ಪಿರಿಯಾಪಟ್ಟಣ ತಾಲ್ಲೂಕಿನ ಆನೆಚೌಕೂರು, ದೊಡ್ಡಹರವೆ, ಕಾವೇರಿ, ಮುದ್ದೇನಹಳ್ಳಿ ವ್ಯಾಪ್ತಿಯ 100 ಚದರ ಕಿ.ಮೀ ಅರಣ್ಯ ಸೇರ್ಪಡೆಗೊಂಡಿದೆ. ವಿರಾಜಪೇಟೆ ತಾಲ್ಲೂಕಿನ ಮಾವಕಲ್, ದೇವಮಚ್ಚಿ ಅರಣ್ಯದ 70 ಚದರ ಕಿ.ಮೀ, ಎಚ್‌.ಡಿ.ಕೋಟೆ ತಾಲ್ಲೂಕಿನ ಸೊಳ್ಳೆಪುರ ಭಾಗದ 30 ಚದರ ಕಿ.ಮೀ. ವ್ಯಾಪ್ತಿಯನ್ನೂ ಸೇರಿಸಲಾಗಿದೆ.

ADVERTISEMENT

ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರು, ವಿರಾಜಪೇಟೆ ತಾಲ್ಲೂಕಿನ ತಿತಿಮತಿ ನಡುವಿನ 12 ಕಿ.ಮೀ ಅರಣ್ಯ ಪ್ರದೇಶದೊಳಗಿನ ಅಂತರರಾಜ್ಯ ಹೆದ್ದಾರಿಯೂ ವನ್ಯಜೀವಿ ವಿಭಾಗಕ್ಕೆ ಸೇರಿಕೊಂಡಿದೆ. ಈ ಹಿಂದೆ ಹೆದ್ದಾರಿಯ ಒಂದು ಬದಿಯ ಅರಣ್ಯ ಪ್ರದೇಶ ವನ್ಯಜೀವಿ ವಿಭಾಗಕ್ಕೆ ಸೇರಿದ್ದರೆ, ಮತ್ತೊಂದು ಬದಿಯ ಮೀಸಲು ಅರಣ್ಯದ ವ್ಯಾಪ್ತಿಗೆ ಒಳಪಟ್ಟಿತ್ತು.

12 ಕಿ.ಮೀ ಉದ್ದದ ಅರಣ್ಯದೊಳಗಿನ ಹೆದ್ದಾರಿಯಲ್ಲಿ ವಾಹನಗಳು ಓಡಾಡುವಾಗ ಕಾಡುಕೋಣ, ಆನೆಯಂಥ ದೊಡ್ಡ ಪ್ರಾಣಿಗಳೂ ಬಲಿಯಾಗಿದ್ದವು. ಇದನ್ನು ತಡೆಗಟ್ಟುವುದಕ್ಕಾಗಿ ಮೂರು ತಿಂಗಳ ಹಿಂದೆ ಪ್ರತಿ 500 ಮೀಟರ್‌ಗೆ ಒಂದರಂತೆ 21 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಇದರಿಂದ ವಾಹನಗಳ ವೇಗ ತಗ್ಗಿ ಪ್ರಾಣಿಗಳು ಬಲಿಯಾಗುವುದು ಕಡಿಮೆಯಾಗಿತ್ತು.

ಆದರೂ, ವಾಹನಗಳ ವೇಗ ನಿಯಂತ್ರಣಕ್ಕೆ ಮತ್ತೆ ಅರಣ್ಯ ಇಲಾಖೆ ‘ಹೈವೆ ಪಟ್ರೋಲ್ ವಿಶೇಷ ಪಡೆ’ ನೇಮಿಸಿದೆ. ಪ್ರತಿ 5 ಕಿ.ಮೀ ಒಂದರಂತೆ ಈ ವಿಶೇಷ ಪಡೆ ಗಸ್ತು ತಿರುಗುತ್ತಾ ಅರಣ್ಯ ವ್ಯಾಪ್ತಿಯ 12 ಕಿ.ಮೀ ಉದ್ದಕ್ಕೂ ಕಾರ್ಯಾಚರಣೆ ನಡೆಸಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಈಗ ವನ್ಯಜೀವಿ ವಲಯದ ಮಧ್ಯದಲ್ಲಿ ಅಂತರರಾಜ್ಯ ಹೆದ್ದಾರಿ ಹಾದು ಹೋಗಲಿದೆ. ಭವಿಷ್ಯದಲ್ಲಿ ರಾತ್ರಿ ವೇಳೆ ವಾಹನ ಓಡಾಟಕ್ಕೂ ಬ್ರೇಕ್‌ ಬೀಳುವ ಸಾಧ್ಯತೆಯಿದೆ. ಅದಕ್ಕೆ ದಕ್ಷಿಣ ಕೊಡಗು ಭಾಗದಲ್ಲಿ ಸಾಕಷ್ಟು ವಿರೋಧವೂ ವ್ಯಕ್ತವಾಗುತ್ತಿದೆ. ರಾತ್ರಿ ವೇಳೆ ಮೈಸೂರು ಕಡೆಗೆ ತೆರಳಲು ಪರ್ಯಾಯ ಮಾರ್ಗ ಬಳಸಬೇಕಾಗುತ್ತದೆ ಎಂಬುದು ಸಾರ್ವಜನಿಕರ ಅಳಲಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.