ಸಾಂದರ್ಭಿಕ ಚಿತ್ರ
ಬೆಂಗಳೂರು: ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಕಾನೂನು ಚೌಕಟ್ಟು ಬಲಪಡಿಸಲು ಆನ್‌ಲೈನ್ ಮೂಲಕವೇ ಎಫ್‌ಐಆರ್ ದಾಖಲಿಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಗರುಡಾಕ್ಷಿ ಎಂದು ಹೆಸರಿಡಲಾಗಿದೆ.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಈ ತಂತ್ರಾಂಶವು ಸಹಕಾರಿಯಾಗಲಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆಯಲ್ಲಿ ಸಹ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ಆನ್‌ಲೈನ್‌ನಲ್ಲಿ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವೈಲ್ಡ್ ಲೈಫ್ ಟ್ರಸ್ಟ್ ಇಂಡಿಯಾ ಸಹಯೋಗದೊಂದಿಗೆ, ಗರುಡಾಕ್ಷಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.
ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೆಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗತ್ತದೆ. ನಂತರ ಇದನ್ನು ಹಂತ ಹಂತವಾಗಿ ಎಲ್ಲ ವಿಭಾಗಗಳಿಗೂ ವಿಸ್ತರಿಸಲಾಗುವುದು.
ಗರುಡಾಕ್ಷಿ ಆನ್ ಲೈನ್ ಎಫ್‌ಐಆರ್ ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬಲಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಇದಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.