ADVERTISEMENT

ಅರಣ್ಯ ರಕ್ಷಕರ ಹುದ್ದೆ ಗೊಂದಲ: ಅಭ್ಯರ್ಥಿಗಳ ಬೇಸರ

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಏಪ್ರಿಲ್ 2021, 19:30 IST
Last Updated 18 ಏಪ್ರಿಲ್ 2021, 19:30 IST

ಧಾರವಾಡ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ಆಹ್ವಾನಿಸಿದ್ದ ಅರಣ್ಯ ರಕ್ಷಕ ಹುದ್ದೆಗೆ ಶುಕ್ರವಾರ ನಡೆದ ದೈಹಿಕ ಪರೀಕ್ಷೆಯಲ್ಲಿ ಗೊಂದಲ ಉಂಟಾಗಿರುವ ಕುರಿತು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಿಗಮವು 32 ಅರಣ್ಯ ರಕ್ಷಕ ಹುದ್ದೆಗೆ 2016ರಲ್ಲಿ ಅರ್ಜಿ ಆಹ್ವಾನಿಸಿತ್ತು. ಆದರೆ 2018ರಲ್ಲಿ ನಿಗಮ ಮರು ಅಧಿಸೂಚನೆ ಪ್ರಕಟಿಸಿ ಹುದ್ದೆಯ ಸಂಖ್ಯೆಯನ್ನು 22ಕ್ಕೆ ಇಳಿಸಿತ್ತು. ಇದಕ್ಕೆ ಶುಕ್ರವಾರ ದೈಹಿಕ ಪರೀಕ್ಷೆ ನಡೆಸಿತ್ತು.

ಅರ್ಜಿ ಸಲ್ಲಿಸಿದ್ದವರಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದ 431 ಅಭ್ಯರ್ಥಿಗಳಲ್ಲಿ 170 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು. ದೈಹಿಕ ಪರೀಕ್ಷೆಯಲ್ಲಿ 1600 ಮೀಟರ್‌ ಓಟವನ್ನು 6 ನಿಮಿಷದಲ್ಲೇ ಕ್ರಮಿಸಬೇಕು ಎಂಬ ದಿಢೀರ್ ಷರತ್ತು ಅಭ್ಯರ್ಥಿಗಳನ್ನು ಗೊಂದಲಕ್ಕೀಡು ಮಾಡಿತ್ತು. ಆದರೆ ಇವರಲ್ಲಿ ಕೇವಲ 16 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿದ್ದು ಉಳಿದ ಅಭ್ಯರ್ಥಿಗಳಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಅಭ್ಯರ್ಥಿಯೊಬ್ಬರು, ‘ಈ ಮೊದಲು ಅರಣ್ಯ ಇಲಾಖೆಯು 339 ಹುದ್ದೆಗಳಿಗೆ ನಡೆಸಿದ್ದ ದೈಹಿಕ ಪರೀಕ್ಷೆಯನ್ನು 7 ನಿಮಿಷಗಳಿಗೆ ನಿಗದಿಪಡಿಸಿತ್ತು. ಪೊಲೀಸ್ ಸಿಬ್ಬಂದಿ ನೇಮಕದಲ್ಲೂ ಇದೇ ಸಮಯವನ್ನು ಪಾಲಿಸಲಾಗುತ್ತದೆ. ಆದರೆ ಅರಣ್ಯ ಅಭಿವೃದ್ಧಿ ನಿಗಮ ನಡೆಸಿದ ಈ ನೇಮಕಾತಿಯಲ್ಲಿ ಸಮಯವನ್ನು 6 ನಿಮಿಷಗಳಿಗೆ ನಿಗದಿಪಡಿಸಿದ್ದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗಲಿಲ್ಲ’ ಎಂದರು.

‘ಕೋವಿಡ್–19 ಭೀತಿ ಮತ್ತು ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದಾಗಿ ಬಸ್ಸುಗಳು ಇಲ್ಲದ್ದರಿಂದ ರಾಜ್ಯದ ನಾನಾ ಕಡೆಯಿಂದ ಅಭ್ಯರ್ಥಿಗಳಿಗೆ ಧಾರವಾಡಕ್ಕೆ ಬರಲು ಸಾಧ್ಯವಾಗಿಲ್ಲ. ವಿಶ್ವವಿದ್ಯಾಲಯ, ಕೆ–ಸೆಟ್ ಪರೀಕ್ಷೆಗಳೂ ಮುಂದೂಡಿರುವಾಗ ಈ ಪರೀಕ್ಷೆಯನ್ನೂ ಮುಂದೂಡಬಹುದಿತ್ತು‘ ಎಂದು ಹೇಳಿದರು.

ಐದು ವರ್ಷಗಳಿಂದ ಪರೀಕ್ಷೆ ನಡೆಸದ ನಿಗಮ, ಈಗ ಕೆಲವೇ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿದೆ. ಅದರಲ್ಲೂ ಆರು ಹುದ್ದೆಗಳನ್ನು ಬ್ಯಾಕ್‌ಲಾಗ್‌ ಆಗಿ ಉಳಿಸಿರುವುದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ನಿಗಮದ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.