ADVERTISEMENT

ಅರಣ್ಯ ‌ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕ: ಸಚಿವ ಈಶ್ವರ ಬಿ.ಖಂಡ್ರೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 7:45 IST
Last Updated 5 ಜುಲೈ 2025, 7:45 IST
   

ಕಲಬುರಗಿ: ವನ್ಯಜೀವಿ ಸಂರಕ್ಷಣೆಯನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಲು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6000 ಕಾಯಂ ಹಾಗೂ ಗುತ್ತಿಗೆ ಆಧರಿತ ಹುದ್ದೆಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ 341 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 540 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಹುಲಿಗಳ ಸಾವಿಗೆ ಸಂಬಂಧಿಸಿದಂತೆ ‌ಈಗಾಗಲೇ ಅಧಿಕಾರಿಗಳ ಅಮಾನತಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಸಕಾಲಕ್ಕೆ ಅರಣ್ಯ ಸಿಬ್ಬಂದಿಗೆ ವೇತನ ಪಾವತಿಯಾಗದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಅನಾದಿ‌ ಕಾಲದಿಂದ 2 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದೆ. ಅರಣ್ಯ ‌ಭೂಮಿ ಕ್ಷೀಣಿಸುತ್ತಿರುವುದರಿಂದ ವನ್ಯಜೀವಿ ಮಾನವ ಸಂಘರ್ಷ ನಡೆಯುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 248 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದು, ಒಟ್ಟಾರೆ 6231 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ. ಇದರಿಂದ ₹10 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿ ಇಲಾಖೆಯ ಸುಪರ್ದಿಗೆ ಬಂದಂತಾಗಿದೆ ಎಂದು ವಿವರಿಸಿದರು.

ಆನೆ, ಹುಲಿಗಳ ದಾಳಿಯಿಂದಾಗಿ ಪ್ರತಿ ವರ್ಷ 50ರಿಂದ 60 ಜನರು ಸಾವಿಗೀಡಾಗುತ್ತಿದ್ದಾರೆ. ಆನೆ ಮಾನವ ಸಂಘರ್ಷ ತಪ್ಪಿಸಲು ಕಾಡಿನಿಂದ ಆನೆಗಳು ‌ಬರುವುದನ್ನು ತಪ್ಪಿಸಬೇಕಿದೆ. ಅದಕ್ಕಾಗಿ ಅರಣ್ಯದಲ್ಲಿ ಹೆಚ್ಚಿನ ಬಿದಿರು ಬೆಳೆಸಿ ಆನೆಗಳಿಗೆ ಆಹಾರ ಒದಗಿಸಲಾಗುವುದು. ಆನೆ ಕಾರಿಡಾರ್ ಗಳನ್ನು ಹಂತ ಹಂತವಾಗಿ ಪುನರ್ ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕಲ್ಯಾಣ ‌ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿನ ತಾಪ ತಗ್ಗಿಸಲು ಈ ಭಾಗದ ಐದು ಜಿಲ್ಲೆಗಳಲ್ಲಿ 25 ಲಕ್ಷ ದೊಡ್ಡ ಗಾತ್ರದ ಸಸಿಗಳನ್ನು ನೆಡಲಾಗುತ್ತಿದೆ. ಅದಕ್ಕಾಗಿ ಇಂದು ಕಲಬುರಗಿಯಲ್ಲಿ ಹಸಿರು ಪಥ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.