ADVERTISEMENT

ಕಡಿಮೆ ಎತ್ತರ: ಡಿಆರ್‌ಎಫ್‌ಒ ಮನೆಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 18:48 IST
Last Updated 25 ಜೂನ್ 2019, 18:48 IST

ಧಾರವಾಡ: ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ನೇಮಕಗೊಂಡ ನಾಲ್ವರು ಪ್ರಶಿಕ್ಷಣಾರ್ಥಿಗಳನ್ನು ನಿಗದಿತ ಎತ್ತರ ಇಲ್ಲ ಎನ್ನುವ ಕಾರಣ ಕೊಟ್ಟು ತರಬೇತಿಯಿಂದ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಹೋಗಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

2017–18ರಲ್ಲಿ 329 ಅಭ್ಯರ್ಥಿಗಳುನೇರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದರು. ಇವರನ್ನು ತರಬೇತಿಗಾಗಿ ಇಲ್ಲಿನ ಗುಂಗರಗಟ್ಟಿಯಲ್ಲಿರುವ ಅರಣ್ಯ ಅಕಾಡೆಮಿಗೆ ನಿಯೋಜನೆಗೊಳಿಸಲಾಗಿತ್ತು. ಉಪವಲಯ ಅರಣ್ಯಾಧಿಕಾರಿ ಹುದ್ದೆಗಾಗಿ ಪುರುಷರಿಗೆ ಕನಿಷ್ಠ 163 ಸೆಂ.ಮೀ ಹಾಗೂ ಮಹಿಳೆಯರಿಗೆ ಕನಿಷ್ಠ 150ಸೆಂ.ಮೀ ಎತ್ತರವನ್ನು ನಿಗದಿಪಡಿಸಲಾಗಿತ್ತು. ಆದರೆ ಕೆಲ ಅಭ್ಯರ್ಥಿಗಳು ನಿಗದಿತ ಎತ್ತರಕ್ಕಿಂತ ಕಡಿಮೆ ಇರುವುದನ್ನು ಇಲ್ಲಿ ಅಧಿಕಾರಿಗಳು ಪತ್ತೆ ಮಾಡಿದ್ದರು.

ಮೈಸೂರು ವೃತ್ತದ ಬಿ.ಗಣೇಶ ಎಂಬುವವರು 161 ಸೆಂ.ಮೀ, ಮಂಗಳೂರು ವೃತ್ತದ ಬಿ.ಎ.ವೃಂದಾ 149 ಸೆಂ.ಮೀ, ಕೆನರಾ ವೃತ್ತದ ಪಿ.ಗಂಗಾ 149 ಸೆಂ.ಮೀ ಮತ್ತು ಎಸ್‌.ಟಿ.ಈರಮ್ಮಾ 149.5 ಸೆಂ.ಮೀ ಎತ್ತರ ಇದ್ದಾರೆ. ಇವರನ್ನು ಜೂನ್ 21ರಂದು ತರಬೇತಿಯಿಂದ ಬಿಡುಗಡೆಗೊಳಿಸಲಾಗಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಮಾನವ ಸಂಪನ್ಮೂಲ) ಎ.ರಾಧಾದೇವಿ, ‘ಜೂನ್‌ 10ರಂದು ತರಬೇತಿಗೆ ಹಾಜರಾದರು. ಇವರ ಎತ್ತರ ನಿಗದಿಗಿಂತ ಕಡಿಮೆ ಇರುವುದು ಮೇಲ್ನೋಟಕ್ಕೆ ಕಂಡುಬಂತು. ಹೀಗಾಗಿ ಇವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆವು. ವೈದ್ಯರು ನೀಡಿದ ವರದಿ ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು, ಪ್ರಶಿಕ್ಷಣಾರ್ಥಿಗಳನ್ನು ಕಳುಹಿಸಿಕೊಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.