ADVERTISEMENT

ತೀರ್ಥಹಳ್ಳಿಯಲ್ಲೇ ಅರಣ್ಯ ಉಳಿಸಿದ್ದೇನೆ: ಜ್ಞಾನೇಂದ್ರಗೆ ಖಂಡ್ರೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 22:30 IST
Last Updated 4 ಆಗಸ್ಟ್ 2023, 22:30 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ‘ಕಲ್ಯಾಣ ಕರ್ನಾಟಕ ಭಾಗದವನಾದ ನನಗೆ ಅರಣ್ಯದ ಬಗ್ಗೆ ತಿಳಿದಿಲ್ಲ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಅವರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲೇ ಅರಣ್ಯ ನಾಶ ತಡೆದಿದ್ದೇನೆ’ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿರುಗೇಟು ನೀಡಿದ್ದಾರೆ.

ಜ್ಞಾನೇಂದ್ರ ಟೀಕೆಗೆ ಪತ್ರಿಕಾ ಹೇಳಿಕೆ ಮೂಲಕ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, ‘ನಾನು ಅರಣ್ಯ ಸಚಿವನಾದ ಬಳಿಕ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮೇಗರವಳ್ಳಿ ವಲಯ ಅರಣ್ಯ ಕಚೇರಿ ವ್ಯಾಪ್ತಿಯ ಕೊಕ್ಕೋಡು ಗ್ರಾಮದಲ್ಲಿ ಅರಣ್ಯ ನಾಶ ತಡೆದಿದ್ದೇನೆ. ಅದೇ ರೀತಿ ಸೊರಬ ತಾಲ್ಲೂಕಿನ ಮುಟಗುಪ್ಪೆ ಗ್ರಾಮದಲ್ಲೂ ಅರಣ್ಯ ರಕ್ಷಣೆಗೆ ಕ್ರಮ ಕೈಗೊಂಡಿದ್ದೇನೆ’ ಎಂದಿದ್ದಾರೆ.

‘ಕೊಕ್ಕೋಡು– ಶಿವಳ್ಳಿ ಗ್ರಾಮದ ಸರ್ವೆ ನಂಬರ್‌ 80ರಲ್ಲಿ ಬೆಂಕಿಹಚ್ಚಿ ಅರಣ್ಯ ನಾಶ ಮಾಡಿ, ಕಂದಾಯ ಜಮೀನು ಎಂದು ಬಿಂಬಿಸಿ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಪತ್ರಕರ್ತರೊಬ್ಬರು ನೀಡಿದ ಮಾಹಿತಿ ಆಧರಿಸಿ ಅದನ್ನು ತಡೆಯಲಾಗಿದೆ. ಸೊರಬ ತಾಲ್ಲೂಕಿನ ಮುಟಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳಿಗೆ ವ್ಯಾಪ್ತಿಯಲ್ಲೂ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯೇ ಇಲಾಖೆಯ ಪ್ರಥಮ ಆದ್ಯತೆ. 1978 ಕ್ಕಿಂತ ಮೊದಲು ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವವರಿಗೆ ನ್ಯಾಯ ದೊರಕಿಸಲು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರದಿಂದ ಒತ್ತಡ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಸ್ತೂರಿರಂಗನ್‌ ವರದಿ ಅನುಷ್ಠಾನಕ್ಕೆ ಒತ್ತಡ ಹೇರುತ್ತಿದೆ. ಅದರ ವಿರುದ್ಧ ಆರಗ ಜ್ಞಾನೇಂದ್ರ ಏಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ’ ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.

2022ರ ಏಪ್ರಿಲ್‌ 18ರಂದು ಕೇಂದ್ರ ಸರ್ಕಾರವು ಐಎಫ್‌ಎಸ್‌ ಅಧಿಕಾರಿ ಸಂಜಯ್‌ ಕುಮಾರ್‌ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಿದೆ. ಆ ಸಮಿತಿ ಪಶ್ಚಿಮ ಘಟ್ಟಗಳ ಯಾವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂಬುದನ್ನು ಜ್ಞಾನೇಂದ್ರ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.