ವಿಧಾನಸಭೆ(ಬೆಳಗಾವಿ): ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಫಾರಂ 3 ಸಮಸ್ಯೆಯನ್ನು ಇನ್ನು ಎರಡು ತಿಂಗಳುಗಳಲ್ಲಿ ಬಗೆಹರಿಸಲಾಗುವುದು. ಬಿಬಿಎಂಪಿ ಮಾದರಿಯಲ್ಲಿ ಬಿ ಖಾತಾ ನೀಡುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಪೌರಾಡಳಿತ ಸಚಿವ ರಹೀಂಖಾನ್ ಭರವಸೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಭೀಮಣ್ಣ ಟಿ.ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿ ಈ ವಿಷಯ ತಿಳಿಸಿದರು.
ಈ ಸಮಸ್ಯೆಯ ಪರಿಹಾರಕ್ಕಾಗಿ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಮೂರು ಸಭೆಗಳು ನಡೆದಿದ್ದು, ಅಂತಿಮ ಸಭೆ ನಡೆಯಬೇಕಾಗಿದೆ. ಎರಡು ತಿಂಗಳೊಳಗೆ ಈ ಸಭೆ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
10 ಯೋಜನೆಗಳಿಗೆ ಅನುಮೋದನೆ:
ಬೆಂಗಳೂರಿನ ಇನ್ವೆಸ್ಟ್ ಕರ್ನಾಟಕ ಹಾಗೂ ಹುಬ್ಬಳ್ಳಿಯ ಎಫ್‌ಎಂಸಿಜಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಡಂಬಡಿಕೆಗಳ ಪೈಕಿ 10 ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನಮೋದನೆ ನೀಡಲಾಗಿದೆ ಎಂದು ಬಿಜೆಪಿಯ ಎಂ.ಚಂದ್ರಪ್ಪ ಅವರ ಪ್ರಶ್ನೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.
₹2,912 ಕೋಟಿ ಅನುದಾನ:
ಸ್ವಚ್ಛ ಭಾರತ ಮಿಷನ್ 1.0 ಯೋಜನೆಗೆ ₹854 ಕೋಟಿ ಹಾಗೂ ಸ್ವಚ್ಛ ಭಾರತ ಮಿಷನ್ 2.0 ಯೋಜನೆಗೆ ₹2,058 ಕೋಟಿ ಸೇರಿ ಒಟ್ಟು ₹2912 ಕೋಟಿ ಅನುದಾನವನ್ನು ಯೋಜನೆಯ ಅನುಷ್ಠಾನಕ್ಕೆ ಮೀಸಲು ಇರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ರಾಜ್ಯದ ಎಲ್ಲ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನ ಮಾಡಲು ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಘನತ್ಯಾಜ್ಯ ವಸ್ತುಗಳ ಸಂಗ್ರಹಣೆ, ಸಾಗಣಿಕೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯವಿರುವ ಯಂತ್ರೋಪರಣಗಳನ್ನು ಮತ್ತು ಸಿವಿಎಲ್ ಕಾಮಗಾರಿ ಕೈಗೊಳ್ಳಲು ವಿಸ್ತೃತ ಯೋಜನೆಗೆ ಅನುಮತಿ ನೀಡಿದ್ದು ₹370 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ–ಧಾರವಾಡದಲ್ಲಿ 450 ಟಿಪಿಡಿ ಹಾಗೂ ತುಮಕೂರು ನಗರದಲ್ಲಿ 140 ಟಿಪಿಡಿ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಹಳೆಯ ಪಾರಂಪರಿಕ ತ್ಯಾಜ್ಯವನ್ನು ತೆರವುಗೊಳಿಸಲು ಬಯೋ ಮೈನಿಂಗ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.