ADVERTISEMENT

ಶೃಂಗೇರಿ ಶಾಖಾಮಠದ ಮಾಜಿ ಆಡಳಿತಾಧಿಕಾರಿ ಬಂಧನ

ಸ್ವಾಮೀಜಿ ಬೆದರಿಸಿ, ₹150 ಕೋಟಿಗೆ ಬೇಡಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 19:36 IST
Last Updated 13 ಜುಲೈ 2018, 19:36 IST

ಬೆಂಗಳೂರು: ಶೃಂಗೇರಿ ಶಾಖಾ ಮಠವಾದ ಶಿವಗಂಗಾ ಮಠದ ಸ್ವಾಮೀಜಿಯನ್ನು ಬೆದರಿಸಿ, ₹ 150 ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪದ ಸಂಬಂಧ, ಮಠದ ಮಾಜಿ ಆಡಳಿತಾಧಿಕಾರಿ ಎನ್‌.ಎಲ್‌.ನರಸಿಂಹಯ್ಯ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗಿರಿನಗರ ನಿವಾಸಿಯಾದ ನರಸಿಂಹಯ್ಯ, ತಮ್ಮ ಸಹಚರರಾದ ಮಹೇಶ್ ಶರ್ಮ, ಟಿ.ಆರ್‌.ಆನಂದ್ ಹಾಗೂ ಕೃಷ್ಣ ಜತೆಯಲ್ಲಿ ಅಮೆರಿಕಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ಹಣ ನೀಡುವುದಾಗಿಮಠದ ಸಿಬ್ಬಂದಿಯಿಂದ ಕರೆ ಮಾಡಿಸಿ ಕರೆಸಿಕೊಂಡು ಬಂಧಿಸಲಾಯಿತು. ಅವರಿಂದ 30ಕ್ಕೂ ಹೆಚ್ಚು ಆಸ್ತಿಗಳ ದಾಖಲೆಗಳನ್ನುಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯಲ್ಲಿರುವ ಮಠಕ್ಕೆ ಮೈಸೂರು ಅರಸರು ದೇಣಿಗೆಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ನೀಡಿದ್ದರು. ಅದರ ದಾಖಲೆಗಳು ಮಠದ ಪೀಠಾಧಿಪತಿ ಆಗಿದ್ದ ಸಚ್ಚಿದಾನಂದ ಸ್ವಾಮೀಜಿಯವರ ಬಳಿ ಇದ್ದವು. ಅವರು ತೀರಿಕೊಂಡ ಬಳಿಕ ಮಠದ ಆಡಳಿತಾಧಿಕಾರಿಯಾಗಿದ್ದ ನರಸಿಂಹಯ್ಯ ಎಲ್ಲ ದಾಖಲೆಗಳನ್ನು ಕಳವು ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ದಾಖಲೆಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪಿ, ಸ್ವಾಮೀಜಿಯನ್ನು ಭೇಟಿಯಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದು ಗೊತ್ತಾಗುತ್ತಿದ್ದಂತೆ, ಮಠದ ಹಾಲಿ ಆಡಳಿತಾಧಿಕಾರಿ ಶ್ರೀನಿವಾಸ್‌ ರಾವ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಸಿಸಿಬಿಗೆ ಈ ಪ್ರಕರಣದ ತನಿಖೆ ವರ್ಗಾಯಿಸಲಾಗಿತ್ತು’ ಎಂದರು.

208 ಎಕರೆ ಭೂಮಿ ಮಾರಿದ್ದ ಸ್ವಾಮೀಜಿ: 1960ರಲ್ಲಿ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾಧಿಪತಿಯಾಗಿದ್ದ ವೇಳೆಯಲ್ಲಿ ಮಠ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಮೈಸೂರು ಅರಸರ ಅನುಮತಿ ಪಡೆದು ದೇವನಹಳ್ಳಿ ತಾಲ್ಲೂಕಿನ ಜೋಡಿ ಲಕ್ಷ್ಮಿಪುರದಲ್ಲಿದ್ದ 208 ಎಕರೆ ಭೂಮಿಯನ್ನು ‘ಏರ್‌ಫೋರ್ಸ್‌ ಎಂಪ್ಲಾಯೀಸ್ ಅಸೋಸಿಯೇಷನ್‌’ಗೆ ಮಾರಾಟ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾರಾಟ ಪ್ರಶ್ನಿಸಿದ್ದ ಆಡಳಿತಾಧಿಕಾರಿ, ಮಠಕ್ಕೆ ಆಸ್ತಿ ವಾಪಸ್‌ ಕೊಡಿಸುವಂತೆ ಏರ್‌ಫೋರ್ಸ್‌ ಎಂಪ್ಲಾಯೀಸ್ ಅಸೋಸಿಯೇಷನ್‌ ವಿರುದ್ಧ ದೇವನಹಳ್ಳಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅಸೋಸಿಯೇಷನ್‌ ಪದಾಧಿಕಾರಿಗಳು, ಸ್ವಾಮೀಜಿಯನ್ನು ಭೇಟಿ ಮಾಡಿ ಮಾರಾಟದ ದಾಖಲೆಗಳನ್ನು ತೋರಿಸಿದ್ದರು. ಅದಕ್ಕೆ ಸ್ಪಂದಿಸಿದ್ದ ಸ್ವಾಮೀಜಿ, ‘ಒಮ್ಮೆ ಮಾರಾಟ ಮಾಡಿದ್ದನ್ನು ವಾಪಸ್ ಕೇಳುವುದು ಧರ್ಮವಲ್ಲ’ ಎಂದು ಹೇಳಿ ನ್ಯಾಯಾಲಯದ
ಲ್ಲಿದ್ದ ಮೊಕದ್ದಮೆ ವಾಪಸ್‌ ಪಡೆದಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಪ್ರಕರಣ ವಾಪಸ್‌ ಪಡೆದಿದ್ದಕ್ಕೆ ಪ್ರತಿಫಲವಾಗಿ ಅಸೋಸಿಯೇಷನ್ ಪದಾಧಿಕಾರಿ, ಭೂಮಿಯನ್ನು ವಾಪಸ್‌ ಮಠಕ್ಕೆ ಕೊಟ್ಟಿದ್ದರು. ಅದು ತಿಳಿಯುತ್ತಿದ್ದಂತೆ ಆರೋಪಿ ನರಸಿಂಹಯ್ಯ, ಹಣಕ್ಕಾಗಿ ಸ್ವಾಮೀಜಿಗೆ ಬೇಡಿಕೆ ಇಡಲಾರಂಭಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.