ADVERTISEMENT

ನನ್ನ ಕೊಲ್ಲಲೆತ್ನಿಸುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು: ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 11:48 IST
Last Updated 25 ಜನವರಿ 2020, 11:48 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ... ನಿಮ್ಮ ಜೀನ್‌ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ಆದರೆ ನನ್ನ‌ ಜೀನ್‌ ಈ ಮಣ್ಣಿನಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು. 'ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು' ಎಂಬ ಕವಿವಾಣಿ ನೆನಪಿರಲಿ. ಅವರ ಪ್ರತಿನಿಧಿ ನಾನು. ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡವ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಮುಂದೊಂದು ದಿನ ಪ್ರಾಯಶ್ಚಿತ ಪಡಲೆಂದೇ ಇಂದು ನೀವು ಮಾಡಿಕೊಳ್ಳುತ್ತಿರುವ ಪಾಪಗಳಿವು ಎಂದು ಹೇಳಿದ್ದಾರೆ.

ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ದೇವೇಗೌಡರಂಥವರ ಮೇಲೆಯೇ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ ಎಂದು ಕಿಡಿಕಾರಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ಒಕ್ಕಲಿಗ ನಾಯಕತ್ವದ ವಿರುದ್ಧ ಹಿಂದಿನಿಂದಲೂ ದೌರ್ಜನ್ಯ ರಾಜಕಾರಣ ಇದ್ದದ್ದೇ. ಮೂದಲಿಸುವುದು, ಸಲ್ಲದ ಆರೋಪ ಮಾಡುವುದು ಈ ಹಿಂದೆ ನಡೆದ ತಂತ್ರಗಳು. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯವಾಗಿದೆ ಎಂದು ತಿಳಿಸಿದರು.

ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆ. ನನ್ನನ್ನು ಕೊಲ್ಲಿಸುವ ಕೆಲಸಕ್ಕೆ ಕೈಹಾಕಿದವರೇ ಒಂದು ವಿಚಾರ ತಿಳಿದುಕೊಳ್ಳಿ. ನನ್ನಂತೆ ಹೋರಾಡಬಲ್ಲ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಪಡೆ ನನ್ನ ಬೆನ್ನಿಗಿದೆ. ನನ್ನನ್ನು ಕೊಲ್ಲಬಹುದು. ಆದರೆ ನನ್ನ ಬೆನ್ನಿಗೆ ನಿಂತವರನ್ನು ಕೊಲ್ಲಲಾದೀತೆ? ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಾನು‌ ನಡೆಸುತ್ತಿರುವ ಹೋರಾಟಕ್ಕೆ ಬೆದರಿರುವ ಬಿಜೆಪಿ ನನ್ನನ್ನು 'ಪಾಕಿಸ್ತಾನಿ' ಎಂದು ಕರೆದು ಅಪಮಾನಿಸುವ ಪ್ರಯತ್ನ ಮಾಡುತ್ತಿದೆ. ಕೊಲ್ಲಲು ಬಂದವರದ್ದು ಬೆದರಿಕೆಯ 'ಉಗ್ರ' ತಂತ್ರವಾದರೆ, ಅವರದ್ದೇ ಸಿದ್ದಾಂತ ಪ್ರತಿಪಾದಿಸುತ್ತಿರುವ ಬಿಜೆಪಿಯದ್ದು ಅಪಮಾನದ ತಂತ್ರ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.