ಬೆಂಗಳೂರು: ಈಗ ಇರುವ ಕರ್ನಾಟಕ ಲೋಕಸೇವಾ ಆಯೋಗವನ್ನೇ (ಕೆಪಿಎಸ್‌ಸಿ) ರದ್ದುಗೊಳಿಸಿ, ಪಾರದರ್ಶಕ ಮತ್ತು ಜವಾಬ್ದಾರಿಯುತ ಹೊಸ ಆಯೋಗ ರಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಒತ್ತಾಯಿಸಿದ್ದಾರೆ.
ಆಯೋಗ ನಡೆಸುವ ನೇಮಕಾತಿ ಪರೀಕ್ಷೆಗಳ ಅವ್ಯವಸ್ಥೆ, ಅಕ್ರಮಗಳ ಫಲವಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಕನ್ನಡ ಅನುವಾದದ ದೋಷಗಳಿಂದಾಗಿ ಈಚೆಗೆ ನಡೆದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಿಂದೆ ನಡೆದ ಹಲವು ಪರೀಕ್ಷೆಗಳ ಅಕ್ರಮದಿಂದಾಗಿ ಪ್ರತಿಭಾವಂತರು ಅವಕಾಶ ವಂಚಿತರಾಗಿದ್ದಾರೆ ಎಂದು ದೂರಿದ್ದಾರೆ.
ಈ ಎಲ್ಲ ಗೊಂದಲಗಳಿಗೆ ಸರ್ಕಾರವೇ ಹೊಣೆ. ಕೆಪಿಎಸ್‌ಸಿ ದೋಷಗಳನ್ನು ತಿದ್ದುತ್ತೇವೆ. ಸರಿಪಡಿಸುತ್ತೇವೆ ಎನ್ನುವ ಭರವಸೆಗಳನ್ನು ಈಡೇರಿಸುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಅವ್ಯವಸ್ಥೆ, ಆಡಳಿತ ವೈಫಲ್ಯ ಸರಿಯಾಗುತ್ತಿಲ್ಲ. ಆಯೋಗವನ್ನು ಮುಂದುವರಿಸುವುದರಲ್ಲಿ ಅರ್ಥವೇ ಇಲ್ಲ. ರಾಜಕೀಯ ನೆಲೆಯ ಆಧಾರದಲ್ಲಿ ನೇಮಕವಾಗುವವರಿಂದ ಇಂತಹ ವಿಫಲತೆ ಸಹಜ ಎಂದು ಆರೋಪಿಸಿದ್ದಾರೆ.
ಪರೀಕ್ಷಾ ವ್ಯವಸ್ಥೆಯಲ್ಲಿ ಲೋಪ ಎಸಗುವ, ಅಕ್ರಮ ನಡೆಸುವ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ವೈಫಲ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಾಗಿದೆ. ಉದ್ಯೋಗದಾತ ಸಂಸ್ಥೆಯ ಹುಳುಕು ಸರಿಪಡಿಸುವಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ- ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.