ADVERTISEMENT

ರೈತರ ಸಾಲ ಮನ್ನಾಕ್ಕೆ ಆದ್ಯತೆ

ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಸಿಎಂಪಿ ಸಮಿತಿ ಮೊದಲ ಸಭೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 18:48 IST
Last Updated 20 ಜೂನ್ 2018, 18:48 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ಸಮ್ಮಿಶ್ರ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿ‌ (ಸಿಎಂಪಿ) ರೈತರ ಸಾಲಮನ್ನಾ ವಿಷಯಕ್ಕೆ ಆದ್ಯತೆ ನೀಡಲು ಜೆಡಿಎಸ್‌– ಕಾಂಗ್ರೆಸ್‌ ಹಿರಿಯ ನಾಯಕರನ್ನೊಳಗೊಂಡ ಸಿಎಂಪಿ ಸಮಿತಿ ಒಮ್ಮತಕ್ಕೆ ಬಂದಿದೆ.

ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಅಧ್ಯಕ್ಷತೆಯಲ್ಲಿ ಸಮಿತಿಯ ಮೊದಲ ಸಭೆ ಬುಧವಾರ ಸಂಜೆ ಇಲ್ಲಿ ನಡೆಯಿತು.

ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ, ಎರಡೂ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಅಂಶಗಳನ್ನು ಸೇರಿಸಿ ಸಿಎಂಪಿ ಕರಡು ರಚಿಸುವ ಕುರಿತು ಉಭಯ ಪಕ್ಷಗಳ ನಾಯಕರು ಚರ್ಚೆ ನಡೆಸಿದರು.

ADVERTISEMENT

ಸಭೆ ಬಳಿಕ ಮಾತನಾಡಿದ ಮೊಯಿಲಿ, ‘ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಪಂಜಾಬ್ ಮತ್ತು ಕರ್ನಾಟಕದಲ್ಲಿ ಈಗಾಗಲೇ ಸಾಲಮನ್ನಾ ಮಾಡಲಾಗಿದೆ. ಪಂಜಾಬ್‌ನಲ್ಲಿ ಸಾಲ ಮನ್ನಾ ಸಂಪೂರ್ಣ ಯಶಸ್ವಿಯಾಗಿದ್ದು, ಅಲ್ಲಿಂದಲೂ ಮಾಹಿತಿ ಪಡೆಯುತ್ತೇವೆ’ ಎಂದರು.

‘ಸಮ್ಮಿಶ್ರ ಸರ್ಕಾರ ಒತ್ತು ನೀಡಬೇಕಾದ ವಿಷಯಗಳನ್ನು ಸೇರಿಸಿ ಕರಡು ಪ್ರಣಾಳಿಕೆ ರಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳು ಮುಂದುವರಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ. ಇದೇ 25ರಂದು ಮತ್ತೆ ಸಭೆ ಸೇರಲಿದ್ದೇವೆ’ ಎಂದರು.

ಸಹಕಾರ ವಲಯದಲ್ಲಿನ ರೈತರ ₹9,000 ಕೋಟಿ ಸಾಲವನ್ನು ಮೊದಲ ಹಂತದಲ್ಲೆ ಮನ್ನಾ ಮಾಡಿದರೆ 40 ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಹಿರಿಯ ನಾಗರಿಕರಿಗೆ ₹ 6,000 ಮಾಸಾಶನ ಜಾರಿಗೆ ಒತ್ತಾಯಿಸಿದ ಜೆಡಿಎಸ್ ನಾಯಕರು, ಗರ್ಭಿಣಿಯರ ಮತ್ತು ಬಾಣಂತಿಯರ ₹ 6,000 ಭತ್ಯೆ ನೀಡುವ ಬಗ್ಗೆಯೂ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಯಾಗಿ, ಈ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಲು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದರು ಎಂದೂ ಗೊತ್ತಾಗಿದೆ.

ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಎಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪೂರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.