ADVERTISEMENT

ರಾಜ್ಯದ ವಿವಿಧೆಡೆ ಭಾರಿ ಮಳೆ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 2:32 IST
Last Updated 14 ಅಕ್ಟೋಬರ್ 2022, 2:32 IST
ಮಳೆ
ಮಳೆ   

ಬೆಂಗಳೂರು: ರಾಜ್ಯದ ತುಮಕೂರು, ಹಾಸನ, ಕೋಲಾರ ಜಿಲ್ಲೆಗಳಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಶನಿವಾರಸಂತೆಯಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹಲವೆಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗಿವೆ.

ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಇಂಡಿ ತಾಲ್ಲೂಕಿನ ಚೋರಗಿ
ಗ್ರಾಮದ ಪೀರಪ್ಪ ಗೋವಿಂದ ಕೋರೆ ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯಲ್ಲಿ ಮನೆ ಕುಸಿದು ಸುಧಾಬಾಯಿ ಕಾವೇರಿ (81)ಎಂಬುವವರು ಮೃತಪಟ್ಟಿದ್ದಾರೆ.ಮಣ್ಣಿನಡಿ ಸಿಲುಕಿದ್ದ ಅವರ ಮೃತ
ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಸುಧಾಬಾಯಿ ಅವರ ಅಂತ್ಯಕ್ರಿಯೆಗೆ ಸ್ಮಶಾನದಿಂದ ಸ್ಮಶಾನಕ್ಕೆ ಅಲೆದಾಡಿದ ಪ್ರಸಂಗವೂ ನಡೆಯಿತು.

ADVERTISEMENT

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತುಂಗೋಟಿ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಚೌಡಮ್ಮ (70)ಎಂಬುವವರು ಮೃತಪಟ್ಟಿದ್ದಾರೆ. ನಿರಂತರ ಮಳೆ ಪರಿಣಾಮ, ಗದಗ–ಬೆಟಗೇರಿ ಅವಳಿ ನಗರದಲ್ಲಿ ಮನೆ ಕುಸಿದು ಸುಶೀಲವ್ವ ಅಡಿವಯ್ಯ ಕಲ್ಮಠ (60) ಮೃತಪಟ್ಟಿದ್ದು, ಅಡಿವಯ್ಯ ಹಾಗೂ ಬಸಮ್ಮ ಎಂಬುವವರು ಗಾಯಗೊಂಡಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಒಟ್ಟು ಎಂಟು ಮನೆಗಳು ಕುಸಿದಿವೆ. ಕೆಲ ಜಿಲ್ಲೆಗಳಲ್ಲಿ ರಸ್ತೆಗಳು ಹಾಳಾಗಿವೆ. ಸೇತುವೆಗಳು ಮುಳುಗಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಒಳಹರಿವು ಹೆಚ್ಚಳ: ಕಳೆದ ಎರಡು ದಿನಗಳಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕರ್ನಾಟಕ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯ ಒಳಹರಿವು ಹೆಚ್ಚಿದೆ. ಆಲಮಟ್ಟಿ ಜಲಾಶಯದ ಒಳಹರಿವು 80 ಸಾವಿರ ಕ್ಯುಸೆಕ್ ಗೆ ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹೊರಹರಿವನ್ನು 1.20 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.