ADVERTISEMENT

ಬೆಂಗಳೂರಿನಲ್ಲಿ ಐಎಂಎ ಮಾದರಿಯ ಮತ್ತೊಂದು ವಂಚನೆ: ಹಣದೊಂದಿಗೆ ಮಹಿಳೆ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 18:59 IST
Last Updated 6 ಅಕ್ಟೋಬರ್ 2019, 18:59 IST
   

ಬೆಂಗಳೂರು:ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ‘ಐಎಂಎ ಸಮೂಹ’ ಕಂಪನಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ನಡೆಸುತ್ತಿರುವ ಬೆನ್ನಲ್ಲೇ, ನಗರದ ಮತ್ತೊಂದು ಕಂಪನಿ ಅದೇ ಮಾದರಿ ಯಲ್ಲೇ ಜನರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣ ತಡವಾಗಿ ಬಯಲಿಗೆ ಬಂದಿದೆ.

‘ತಿಂಗಳಿಗೆ ಶೇ 40ರಷ್ಟು ಲಾಭಾಂಶ ನೀಡುವ ಆಮಿಷವೊಡ್ಡಿ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ‘ಹೆಮ್ಮೆಲ್ ಅಡ್ವೈಸರಿ’ ಕಂಪನಿಯು ಹಣ ವಾಪಸ್ ನೀಡದೇ ವಂಚಿಸಿದೆ. ಕಂಪನಿ ಕಚೇರಿಗೂ ಬೀಗ ಹಾಕಿಕೊಂಡು ಮಾಲೀಕರು ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ’ ಎಂದು ಹೂಡಿಕೆದಾರ ನೌಶಾದ್ ಎಂಬುವರು ಆರ್‌.ಟಿ. ನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ಕಂಪನಿ ಮಾಲೀಕ ರಾದ ನಾಜಿಯಾ ಸಿರಾಜುದ್ದೀನ್, ಅವರ ಸಹೋದರ ಮೊಸೀನ್ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸದ್ಯಕ್ಕೆ ಆರೋಪಿಗಳು ತಲೆಮರೆಸಿ
ಕೊಂಡಿದ್ದಾರೆ.

ADVERTISEMENT

‘ಆರ್‌.ಟಿ. ನಗರದ ತಿಮ್ಮಯ್ಯ ಗಾರ್ಡನ್ 3ನೇ ಅಡ್ಡರಸ್ತೆಯಲ್ಲಿ ಕಂಪನಿಯ ಕಚೇರಿ ಇದೆ. ಕೆಲವು ತಿಂಗಳಿ ನಿಂದಲೇ ಕಚೇರಿಗೆ ಬೀಗ ಹಾಕಲಾಗಿದ್ದು, ಈಗ ಒಬ್ಬ ಗ್ರಾಹಕ ಮಾತ್ರ ಠಾಣೆಗೆ ಬಂದು ದೂರು ನೀಡಿದ್ದರು. ಇನ್ನೂ ಹಲವರು ದೂರು ನೀಡುವ ಸಾಧ್ಯತೆ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೆಮ್ಮೆಲ್ ಅಡ್ವೈಸರಿ ಕಂಪನಿಯು ಐಎಂಎ ಮಾದರಿಯಲ್ಲೇ ಜನರಿಂದ ಹಣ ಪಡೆದಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ಆದರೆ, ಹಣದ ಪ್ರಮಾಣ ಮಾತ್ರ ಕಡಿಮೆ ಇದೆ. ಗ್ರಾಹಕರು ಸಂಪೂರ್ಣ ಮಾಹಿತಿ ನೀಡಿದರೆ ಮಾತ್ರ ವಂಚನೆಯ ಎಷ್ಟೆಂಬುದು ಮೊತ್ತ ಸ್ಪಷ್ಟವಾಗಲಿದೆ’ ಎಂದು ಅವರು ತಿಳಿಸಿದರು.

ರೌಡಿಗಳ ಬಿಟ್ಟು ಬೆದರಿಕೆ: ‘ಹಣ ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿ ನೀಡುವು ದಾಗಿ ಆಮಿಷವೊಡ್ಡಿದ್ದ ನಾಜಿಯಾ ಸಿರಾಜುದ್ದೀನ್ ಅವರೇ ನನ್ನನ್ನು ಕಚೇರಿಗೆ ಕರೆಸಿಕೊಂಡಿದ್ದರು. ಶೇ 40ರಷ್ಟು ಲಾಭಾಂಶ ನೀಡುವುದಾಗಿಯೂ ಭರವಸೆ ನೀಡಿದ್ದರು’ ಎಂದು ನೌಶಾದ್ ದೂರಿನಲ್ಲಿ ತಿಳಿಸಿದ್ದಾರೆ.

‘ಆರೋಪಿ ಮಾತು ನಂಬಿ ಕಂಪನಿಯ ಐಸಿಐಸಿಐ ಬ್ಯಾಂಕ್ ಖಾತೆಗೆ ₹ 4 ಲಕ್ಷ ಜಮೆ ಮಾಡಿದ್ದೆ. ಅದಾದ ನಂತರ ಕಂಪನಿಯಿಂದ ಯಾವುದೇ ಬಡ್ಡಿ ಬಂದಿರಲಿಲ್ಲ. ಅಸಲನ್ನೂ ಕೊಡಲು ಕಂಪನಿಯವರು ಹಿಂದೇಟು ಹಾಕುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ರೌಡಿಗಳನ್ನು ಬಿಟ್ಟು ಹೊಡೆ ಸುವುದಾಗಿಯೂ ಆರೋಪಿಗಳು ಬೆದರಿಕೆ ಹಾಕಲಾರಂಭಿಸಿದ್ದರು’ ಎಂದು ಹೇಳಿದ್ದಾರೆ.

‘ಹೆಚ್ಚು ಒತ್ತಾಯ ಮಾಡಿದ್ದಕ್ಕಾಗಿ ಆರೋಪಿ ಮೊಸೀನ್, ಹಣ ವಾಪಸು ಕೊಡುವುದಾಗಿ ಹೇಳಿದ್ದ. ಆದರೆ, ಆತನೀಗ ಮೊಬೈಲ್ ಸ್ವಿಚ್ ಆಫ್‌ ಮಾಡಿ ಕೊಂಡು ನಾಪತ್ತೆಯಾಗಿದ್ದಾನೆ. ಕಂಪನಿ ಕಚೇರಿಗೂ ಬೀಗ ಹಾಕಲಾಗಿದ್ದು, ಮಾಲೀಕರು ಹಾಗೂ ಸಿಬ್ಬಂದಿ ಎಲ್ಲರೂ ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ನೌಶಾದ್ ವಿವರಿಸಿದ್ದಾರೆ.

–ತಿಂಗಳಿಗೆ ಶೇ 40 ರಷ್ಟು ಲಾಭಾಂಶದ ಆಮಿಷ

– ಕಂಪನಿ ವಿರುದ್ಧ ದೂರು ನೀಡಿದ ಹೂಡಿಕೆದಾರ

– ವಂಚನೆಯ ನಿಖರ ಮೊತ್ತ ಇನ್ನೂ ಅಸ್ಪಷ್ಟ

‘360 ಇನ್ವೆಸ್ಟ್‌ಮೆಂಟ್’ ಕಂಪನಿ ವಿರುದ್ಧವೂ ಎಫ್‌ಐಆರ್‌

ಇನ್ನೊಂದು ಪ್ರಕರಣದಲ್ಲಿ, ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪದಡಿ ಆರ್‌.ಟಿ. ನಗರದ ‘360 ಇನ್ವೆಸ್ಟ್‌ಮೆಂಟ್’ ಕಂಪನಿ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

‘ಶೇ 7ರಷ್ಟು ಲಾಭಾಂಶ ನೀಡುವುದಾಗಿ ಕಂಪನಿಯವರು ಹೇಳಿದ್ದರು. ಅದನ್ನು ನಂಬಿ 2018ರಲ್ಲಿ ₹ 31 ಲಕ್ಷ ಹೂಡಿಕೆ ಮಾಡಿದ್ದೆ. ಅದರಲ್ಲಿ ಕೇವಲ ₹ 1.50 ಲಕ್ಷವನ್ನು ಮಾತ್ರ ವಾಪಸು ಕೊಟ್ಟಿದ್ದಾರೆ. ಉಳಿದ ಲಾಭಾಂಶ ಹಾಗೂ ಅಸಲು ಹಣವನ್ನು ಕೊಡದೇ ವಂಚಿಸಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಆರ್‌.ಟಿ.ನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ವಿನಾಯಕ್ ಭರತ್ ಮೆಹ್ತಾ, ಸೆಂಥಿಲ್‌ಕುಮಾರ್, ವಂದನಾ ಮೆಹ್ತಾ, ಸೋನಿಯಾ ಮಹೇಶ್ವರಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಸುಮಾರು 500 ಹೂಡಿಕೆದಾರರು’

’ಕಂಪನಿ ಕಚೇರಿಗೆ ಹಲವು ದಿನಗಳಿಂದ ಬೀಗ ಹಾಕಲಾಗಿದೆ. ಆ ಬಗ್ಗೆ ಅನುಮಾನಗೊಂಡ ಠಾಣೆ ಪೊಲೀಸರೇ ಗ್ರಾಹಕರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದರು. ಅವಾಗಲೇ ನೌಶಾದ್ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಅಧಿಕಾರಿ ಹೇಳಿದರು. ‘ಬೆಂಗಳೂರು ಸೇರಿದಂತೆ ಹಲವು ನಗರಗಳ ಸುಮಾರು 500 ಮಂದಿ ₹10 ಕೋಟಿಯಿಂದ ₹15 ಕೋಟಿಯಷ್ಟು ಹೂಡಿಕೆ ಮಾಡಿರುವ ಮಾಹಿತಿ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.