ADVERTISEMENT

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ: ಎಂಜಿನಿಯರ್‌ಗೆ ₹36.80 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
<div class="paragraphs"><p>ಸೈಬರ್‌ ಕ್ರೈಂ</p></div>

ಸೈಬರ್‌ ಕ್ರೈಂ

   

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ ತಿಪಟೂರಿನ ಕುಮಾರಸ್ವಾಮಿ ಬಡಾವಣೆಯ ನಿವಾಸಿ ಹಾಗೂ ಎಂಜಿನಿಯರ್‌ ಲಿಖಿತ್‌ ವೈ.ಪಾಟೀಲ ಎಂಬುವರಿಗೆ ₹36.80 ಲಕ್ಷ ವಂಚಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಲಿಂಕ್‌ ಕ್ಲಿಕ್‌ ಮಾಡಿ ಮೊಬೈಲ್‌ ನಂಬರ್‌ ಹಾಕಿದ್ದಾರೆ. ಅವರ ನಂಬರ್‌ ಅನ್ನು ‘ಎಫ್‌–10 ಸ್ಟಾಕ್‌ ಮಾರ್ಕೆಟಿಂಗ್‌ ಎಕ್ಸ್‌ಚೇಂಜ್‌ ಕ್ಲಬ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಮೆಸೇಜ್‌ ಮಾಡಿದ್ದಾರೆ. ಇದನ್ನು ನಂಬಿದ ಲಿಖಿತ್‌ ಗ್ರೂಪ್‌ನಲ್ಲಿದ್ದ ಒಂದು ಮೊಬೈಲ್‌ ನಂಬರ್‌ ಪಡೆದು ಪ್ರತ್ಯೇಕವಾಗಿ ಅವರೊಂದಿಗೆ ಚಾಟಿಂಗ್‌ ಮಾಡಿದ್ದಾರೆ.

ADVERTISEMENT

ನಂತರ ‘ಎಸ್‌ಎಂಸಿಎಲ್‌ಇ’ ಷೇರು ಮಾರುಕಟ್ಟೆಯಲ್ಲಿ ಅಕೌಂಟ್‌ ತೆರೆದಿದ್ದಾರೆ. ಇದಾದ ಮೇಲೆ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಮೊದಲ ಬಾರಿಗೆ ಮಾರ್ಚ್‌ 25ರಂದು ₹6 ಲಕ್ಷವನ್ನು ಸೈಬರ್‌ ಕಳ್ಳರು ಹೇಳಿದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾರೆ. ಏ.2ರ ವರೆಗೆ ಹಂತ ಹಂತವಾಗಿ ಒಟ್ಟು ₹36.80 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ.

ಲಿಖಿತ್‌ ಅವರಿಗೆ ‘ಎಫ್‌–10 ಸ್ಟಾಕ್‌ ಮಾರ್ಕೆಟಿಂಗ್‌ ಎಕ್ಸ್‌ಚೇಂಜ್‌ ಕ್ಲಬ್‌’ ಯಾವುದೇ ಹಣ ವಾಪಸ್‌ ಹಾಕಿಲ್ಲ. ಇದರಿಂದ ಅನುಮಾನಗೊಂಡು ಹೂಡಿಕೆ ಮಾಡಿದ ಹಣ ವಾಪಸ್‌ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೈಬರ್‌ ವಂಚಕರು ಮತ್ತೆ ₹10 ಲಕ್ಷ ಹಣ ಹಾಕುವಂತೆ ವಿವಿಧ ಬ್ಯಾಂಕ್‌ ಖಾತೆಗಳ ವಿವರ ನೀಡಿದ್ದಾರೆ. ಹಣ ಬರುವುದಿಲ್ಲ ಎಂಬುವುದು ಖಾತ್ರಿಯಾದ ನಂತರ ಲಿಖಿತ್‌ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.