ಹೊಸನಗರ: ತಾಲ್ಲೂಕಿನ ಮಸಗಲ್ಲಿ ಕಲ್ಲು ಗಣಿಗಾರಿಕೆಯ ಗುತ್ತಿಗೆದಾರರು ರಾಜಧನ ಪಾವತಿ ಮಾಡದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಜನ ಸಂಗ್ರಾಮ ಪರಿಷತ್ತಿನ ಅಖಿಲೇಶ ಚಿಪ್ಪಳಿ ಹಾಗೂ ಗಿರೀಶ ಆಚಾರಿ ಆರೋಪಿಸಿದ್ದಾರೆ.
ತಾಲ್ಲೂಕಿನ ಮಸಗಲ್ಲಿ ಸ.16ರಲ್ಲಿ 2009ರಲ್ಲಿ 23 ಜನ ಗುತ್ತಿಗೆದಾರರಿಗೆ 5 ವರ್ಷದ ಅವಧಿಗೆ ಕಲ್ಲು ಗಣಿಗಾರಿಕೆ ಮಾಡಲು ಷರತ್ತುಬದ್ಧ ಪರವಾನಗಿ ನೀಡಲಾಗಿತ್ತು. ಆದರೆ ಗಣಿ ಗುತ್ತಿಗೆ ಅವಧಿ ಪೂರ್ಣವಾಗಿ 4 ವರ್ಷ ಕಳೆದರೂ ಸುಮಾರು ₹77,81,761 ರಾಜಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಸೂಲಿ ಮಾಡದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿ ಗುತ್ತಿಗೆದಾರರ ಆಮಿಷಕ್ಕೆ ಬಲಿಯಾಗಿ ರಾಜಧನವನ್ನು ಸಕಾಲದಲ್ಲಿ ಪಡೆದು ಸರ್ಕಾರದ ಖಜಾನೆಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ಮಾಹಿತಿಯಂತೆ ಮಸಗಲ್ಲಿ ಕಲ್ಲು ಗಣಿಗಾರಿಕೆ ರಾಜಧನ ಬಾಕಿ ಇರುವ ಪಟ್ಟಿಯಲ್ಲಿ 23 ಗುತ್ತಿಗೆದಾರರ ಪೈಕಿ ಬಿ. ಗುರುಪ್ರಸಾದ ₹15.78 ಲಕ್ಷ, ಕೆ.ಬಿ. ಜಯಪ್ರಕಾಶ ₹14.13 ಲಕ್ಷ, ಕೆ.ಎಸ್. ಪ್ರಶಾಂತ ₹8.72 ಲಕ್ಷ, ಸಿ.ವಿ. ಚಂದ್ರಶೇಖರ ₹7.30 ಲಕ್ಷ, ಕೆ.ವೈ. ರಾಮಕೃಷ್ಣ ₹7.10 ಲಕ್ಷ, ವೆಂಕಟೇಶ ₹4.62 ಲಕ್ಷ, ಕಲ್ಯಾಣ ಕುಮಾರ ₹4.06 ಲಕ್ಷ, ಜಯಕುಮಾರ ₹3.48 ಲಕ್ಷ, ಚಂದ್ರಮೌಳಿ ₹3.24 ಲಕ್ಷ ಉಳಿಸಿಕೊಂಡಿದ್ದಾರೆ ಅವರು ಎಂದು ದಾಖಲೆ ನೀಡಿದರು.
ಲೋಕಾಯುಕ್ತರಿಗೆ ದೂರು: ಗಣಿಗುತ್ತಿಗೆ ಅವಧಿ ಪೂರ್ಣವಾದರೂ ಮಸಗಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ತನಿಖಾ ಹಂತದಲ್ಲಿದೆ. ಅವಧಿ ನಂತರದ ಅಕ್ರಮ ಗಣಿಗಾರಿಕೆಯಲ್ಲಿ ಬೊಕ್ಕಸಕ್ಕೆ ನಷ್ಟವಾದ ಹಣವನ್ನು ವಸೂಲಿ ಮಾಡಲು ಲೋಕಾಯುಕ್ತರಲ್ಲಿ ಮನವಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.