ADVERTISEMENT

ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ: ಸುತ್ತೂರು ಶ್ರೀ

ಸುತ್ತೂರು ಸ್ವಾಮೀಜಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 21:48 IST
Last Updated 26 ಮೇ 2021, 21:48 IST
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸುತ್ತೂರು ಮಠದ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ ಅವರು ಸಹಾಯಧನ ವಿತರಣೆ ಮಾಡಿದರು. ಸಚಿವ ಎಸ್.ಟಿ.ಸೋಮಶೇಖರ್, ನಿಶಾಂತ್ ಸೋಮಶೇಖರ್ ಇದ್ದಾರೆ
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸುತ್ತೂರು ಮಠದ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ ಅವರು ಸಹಾಯಧನ ವಿತರಣೆ ಮಾಡಿದರು. ಸಚಿವ ಎಸ್.ಟಿ.ಸೋಮಶೇಖರ್, ನಿಶಾಂತ್ ಸೋಮಶೇಖರ್ ಇದ್ದಾರೆ   

ಕೆಂಗೇರಿ: ’ಕೋವಿಡ್‌ ಮಾನವೀಯ ಮೌಲ್ಯಗಳಿಗೆ ಕೊಡಲಿ ಪೆಟ್ಟು ನೀಡುತ್ತಿದೆ. ರಕ್ತ ಸಂಬಂಧಿಗಳು, ಬಂಧುಗಳೇ ತಮ್ಮವರ ಅಂತಿಮ ದರ್ಶನಕ್ಕೆ ಬಾರದಿರುವಂತಹ ಸಂದರ್ಭ ಸೃಷ್ಟಿ ಮಾಡಿದೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳಿತು‘ ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೆಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಸಚಿವ ಎಸ್‌.ಟಿ.ಸೋಮಶೇಖರ್‌ ವತಿಯಿಂದ ₹1 ಲಕ್ಷ ಸಹಾಯಧನ ಹಾಗೂ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಕೊರೊನಾ ಸೋಂಕು ಇಳಿಮುಖವಾಗುತ್ತಿದೆ ಎಂದು ಭ್ರಮಿಸಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇದ್ದದ್ದೇ 2ನೇ ಅಲೆ ವೇಳೆ ಉಂಟಾಗುತ್ತಿರುವ ಅವಘಡಗಳಿಗೆ ಕಾರಣ‘ಎಂದರು.

ADVERTISEMENT

’ಆರ್ಥಿಕವಾಗಿ ಹಿಂದುಳಿದ ಅನೇಕ ಪೋಷಕರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಅವರ ಮಕ್ಕಳಿಗೆ ಮಠದ ವತಿಯಿಂದ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಲಾಗುವುದು‘ ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ’ಸ್ವಯಂ ವೈದ್ಯದಿಂದ ಕೊರೊನಾ ಸೋಂಕು ದೂರವಾಗುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮೂಗಿಗೆ ನಿಂಬೆಹಣ್ಣಿನ ರಸ ಹಚ್ಚುವುದರಿಂದ, ಬಿಸಿನೀರು ಕುಡಿಯುವುದರಿಂದಲೇ ಸೋಂಕು ವಾಸಿಯಾಗುವುದಿಲ್ಲ. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಮಾತ್ರ ಕಾಯಿಲೆಯಿಂದ ಗುಣಮುಖರಾಗಬಹುದು‘ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ವಿಭಾಗಕಾಧಿಕಾರಿ ಡಾ.ಶಿವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ರಶ್ಮಿ ಹನುಮಂತೇಗೌಡ, ಮುಖಂಡರಾದ ಅನಿಲ್ ಚಳಗೇರಿ, ನಿಶಾಂತ್ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.