ಹಾವೇರಿ: ‘ನಗರದ ಕೋವಿಡ್ ಆಸ್ಪತ್ರೆಯಲ್ಲಿ 14 ಖಾಸಗಿ ವೈದ್ಯರು ಒಂದು ವಾರದಿಂದ ಉಚಿತ ಸೇವೆ ಸಲ್ಲಿಸುತ್ತಿದ್ದು, ರಾಜ್ಯದ ಇತರ ಘಟಕಗಳಿಗೆ ಮಾದರಿಯಾಗಿದೆ’ ಎಂದುಭಾರತೀಯ ವೈದ್ಯಕೀಯ ಸಂಘದ (ಐಎಂಎ) ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮೃತ್ಯುಂಜಯ ತುರ್ಕಾಣಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಎಲ್ಲ ವೈದ್ಯರು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಘಟಕದ ಇತರ 40 ವೈದ್ಯರು ಕೂಡ ಶಿಫ್ಟ್ ಪ್ರಕಾರ ಕೆಲಸ ಮಾಡಲು ಸಿದ್ಧರಾಗಿದ್ದಾರೆ’ ಎಂದರು.
‘ಜಿಲ್ಲೆಯಲ್ಲಿರುವ ಬಹುತೇಕ ಖಾಸಗಿ ಆಸ್ಪತ್ರೆಗಳು ತಲಾ 10ರಿಂದ 30 ಹಾಸಿಗೆಗಳನ್ನು ಮಾತ್ರ ಹೊಂದಿವೆ. ಇವುಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡುವುದು ಕಷ್ಟ. ಇದರಿಂದ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಈಚೆಗೆ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ತಿಳಿಸಿದ್ದೆವು. ಆದರೆ, ಕೋವಿಡ್ ಚಿಕಿತ್ಸೆ ನೀಡಲು ನಾವು ಸಿದ್ಧ ಎಂದು ಹೇಳಿದ್ದೆವು. ಹೀಗಾಗಿ ಜಿಲ್ಲಾಡಳಿತ ಈ ಅವಕಾಶ ಮಾಡಿಕೊಟ್ಟಿದೆ’ ಎಂದರು.
‘ಜಿಲ್ಲೆಯ ಆಯುಷ್ ಮತ್ತು ಆಲೋಪಥಿ ವೈದ್ಯರು ಸೇರಿದಂತೆ ಒಟ್ಟು570 ಖಾಸಗಿ ವೈದ್ಯರು ಕೋವಿಡ್ ಸೇವೆಗೆ ಒಪ್ಪಿಗೆ ನೀಡಿ ದ್ದಾರೆ. ಸೇವೆ ಸಲ್ಲಿಸಲು ಮುಂದೆ ಬಂದಿರುವ ವೈದ್ಯರಿಗೆ ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತು ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಡಳಿತದಿಂದ ಉಚಿತವಾಗಿ ನೀಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.