ADVERTISEMENT

ಸಂವಿಧಾನವೇ ಬೆಳಕು| ಅಭಿವ್ಯಕ್ತಿಗೆ ಸಂವಿಧಾನದ ರಕ್ಷಣೆ

ಜಯಸಿಂಹ ಆರ್.
Published 27 ಜನವರಿ 2026, 22:35 IST
Last Updated 27 ಜನವರಿ 2026, 22:35 IST
‘ಸಂವಿಧಾನವೇ ಬೆಳಕು’ ಕುರಿತು ಬೆಂಗಳೂರಿನಲ್ಲಿ ನಡೆದ ಸಂವಾದ
ಪ್ರಜಾವಾಣಿ ಚಿತ್ರ
‘ಸಂವಿಧಾನವೇ ಬೆಳಕು’ ಕುರಿತು ಬೆಂಗಳೂರಿನಲ್ಲಿ ನಡೆದ ಸಂವಾದ ಪ್ರಜಾವಾಣಿ ಚಿತ್ರ   

ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸಂವಿಧಾನದ 19(1)(ಎ) ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸಲಾಗಿದೆ. ಈ ಸ್ವಾತಂತ್ರ್ಯದ ಅಡಿಯಲ್ಲಿ ದೇಶದ ಪ್ರತಿ ನಾಗರಿಕರೂ ಮಾತನಾಡುವ, ಬರೆಯುವ ಮತ್ತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಹಕ್ಕನ್ನು ಪಡೆದಿದ್ದಾರೆ. 

ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಇನ್ನೊಬ್ಬರ ಮಾತು ಮತ್ತು ಅಭಿಪ್ರಾಯವನ್ನು ಕೇಳಿಸಿಕೊಳ್ಳುವ, ಮತ್ತೊಬ್ಬರ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯ ಹೊಂದುವ, ಮಾಹಿತಿಯನ್ನು ಪಡೆದುಕೊಳ್ಳುವ ಮತ್ತು ಪ್ರಶ್ನಿಸುವ ಸ್ವಾತಂತ್ರ್ಯವನ್ನೂ ಒಳಗೊಂಡಿದೆ ಎಂದು ವಿವಿಧ ನ್ಯಾಯಾಲಯಗಳ ಮತ್ತು ಸಂವಿಧಾನ ತಜ್ಞರ ಅಭಿಪ್ರಾಯ. ಫ್ರೆಂಚ್‌ ಚಿಂತಕ ವೋಲ್ಟೇರ್‌ ಹೇಳುವಂತೆ, ‘ನಿನ್ನ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಆದರೆ ಅದನ್ನು ಹೇಳುವ ಹಕ್ಕು ನಿನಗಿದೆ ಎಂಬುದಕ್ಕೆ ನಾನು ಕಡೆಯ ತನಕ ಬದ್ಧವಾಗಿರುತ್ತೇನೆ’ ಎಂಬುದೇ ಅಭಿವ್ಯಕ್ತಿ ಸ್ವಾತಂತ್ರ್ಯ.

ನೃತ್ಯ, ನಾಟಕ, ಗಾಯನ, ಬೀದಿ ನಾಟಕ, ಸಿನಿಮಾ, ಧಾರಾವಾಹಿ, ಛಾಯಾಗ್ರಹಣ, ಚಿತ್ರಕಲೆ, ಸಾಹಿತ್ಯ, ವಿಮರ್ಶೆ... ಎಲ್ಲವೂ ಅಭಿವ್ಯಕ್ತಿ ಸ್ವಾತಂತ್ರ್ಯವೇ ಹೌದು.

ADVERTISEMENT

ಆದರೆ, ಸಂವಿಧಾನವು ನಮಗೆ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಪರಿಪೂರ್ಣವಲ್ಲ. ಅಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ. ದೇಶದ ಭದ್ರತೆ, ಸಾರ್ವಭೌಮತ್ವ, ಏಕತೆ, ಸ್ನೇಹಿ ದೇಶಗಳ ಜತೆಗಿನ ಸಂಬಂಧ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಮತ್ತು ಇತರರ ಮಾನಕ್ಕೆ ಹಾನಿಯುಂಟು ಮಾಡುವಂತಹ ಯಾವುದೇ ರೀತಿಯ ಅಭಿವ್ಯಕ್ತಿಗೆ ನಿರ್ಬಂಧವಿದೆ. ಇವುಗಳನ್ನು ಕಾಪಾಡಿಕೊಳ್ಳಲು ಸರ್ಕಾರವು ಅಗತ್ಯ ಕಾನೂನುಗಳನ್ನು ರೂಪಿಸಬಹುದು ಎಂದು ಸಂವಿಧಾನದ 19(2)ನೇ ವಿಧಿ ಹೇಳುತ್ತದೆ.

ಭಾರತದ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧಗಳು ಬ್ರಿಟಿಷ್‌ ಆಳ್ವಿಕೆಯಲ್ಲಿಯೇ ಆರಂಭವಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷರು ದೇಶದ್ರೋಹ (ಭಾರತೀಯ ದಂಡ ಸಂಹಿತೆಯ 124ಎ) ಕಾನೂನುನ್ನು ಜಾರಿಗೆ ತಂದಿದ್ದರು. ಅಂತಹ ದಬ್ಬಾಳಿಕೆಗಳ ಅನುಭವವಿದ್ದ ಕಾರಣಕ್ಕೇ, ಸಂವಿಧಾನ ರೂಪಿಸಿದ ನಮ್ಮ ಪೂರ್ವಜರು ಅಭಿವ್ಯಕ್ತಿ ಸ್ವಾತಂತ್ರವನ್ನು ನಮಗೆಲ್ಲಾ ನೀಡಿದ್ದಾರೆ. ಪ್ರಭುತ್ವವು ಇಂದಿಗೂ ಈ ಕಾನೂನುಗಳನ್ನು ಉಳಿಸಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುತ್ತಿವೆ.

ಅಮೆರಿಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎರಡೂ ಬೇರೆ–ಬೇರೆಯೇ. ಆದರೆ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವೆಂಬುದು ಪ್ರತ್ಯೇಕವಾಗಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವನ್ನೂ ಒಳಗೊಂಡಿದೆ ಎಂದು ಸುಪ್ರೀಂಕೋರ್ಟ್‌ ವ್ಯಾಖ್ಯಾನಿಸಿದೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಅದರ ಮೇಲಿನ ನಿರ್ಬಂಧಗಳು ಪತ್ರಿಕಾ–ಮಾಧ್ಯಮ ರಂಗಕ್ಕೂ ಅನ್ವಯವಾಗುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಭುತ್ವ ಮತ್ತು ಸಂವಿಧಾನ: ಸಂವಾದ

‘ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಭುತ್ವ ಮತ್ತು ಸಂವಿಧಾನ’ ಎಂಬ ವಿಷಯದ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಸಂವಾದ ನಡೆಯಿತು. ‘ಸಂವಿಧಾನವೇ ಬೆಳಕು–ಒಂದು ಚರ್ಚೆ’ ವಿಷಯದ ಭಾಗವಾಗಿ ನಡೆದ ಸಂವಾದದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ನಟರಾಜ್‌ ಹುಳಿಯಾರ್‌ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್‌ ಪಿ.ಮಣಿವಣ್ಣನ್‌ ಮತ್ತು ಹೈಕೋರ್ಟ್‌ನ ಹಿರಿಯ ವಕೀಲರಾದ ಮಂಜುಳಾದೇವಿ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರಮುಖರು. ‘ಪ್ರಜಾವಾಣಿ’ ರಾಜ್ಯ ವರದಿಗಾರರ ಮುಖ್ಯಸ್ಥ ವೈ.ಗ.ಜಗದೀಶ್‌ ಸಂವಾದ ನಡೆಸಿಕೊಟ್ಟರು.

ಚರ್ಚೆಯಲ್ಲಿ ವ್ಯಕ್ತವಾದ ವಿಷಯಗಳು

  • ಮತ್ತೊಬ್ಬರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳುವುದೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಪ್ರಧಾನ ಅಂಗ. ಆದರೆ ಈಚೆಗೆ ಕೇಳಿಸಿಕೊಳ್ಳುವುದು ಹಿಂದೆ ಸರಿದಿದೆ ಮತ್ತು ಕೇಳುವುದು ಮುನ್ನೆಲೆಗೆ ಬಂದಿದೆ

  • ದೇಶದ್ರೋಹದ ಕಾನೂನನ್ನು ಬಳಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿತ್ತು. ಈಗ ಆ ಕಾನೂನಿನ ಹೆಸರು ಬದಲಾಗಿದೆ. ಸರ್ಕಾರಗಳ ವಿರುದ್ಧ ಮಾತನಾಡುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ

  • ಮತ್ತೊಬ್ಬರ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ಅಭಿಪ್ರಾಯಗಳನ್ನು ನೀಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ರಕ್ಷಣೆ ಪಡೆಯಲಾಗುತ್ತಿದೆ

  • ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತಹ ಕಾನೂನುಗಳನ್ನು ರದ್ದುಪಡಿಸಬೇಕು. ಅಭಿವ್ಯಕ್ತಿಯ ಅಪರಾಧೀಕರಣ ನಿಲ್ಲಬೇಕು

  • ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರಮಗಳ ವಿರುದ್ಧ ಹೊಸ ತಲೆಮಾರಿನ ಕಮಿಡಿಯನ್‌ಗಳು ದೊಡ್ಡಮಟ್ಟದಲ್ಲಿ ದನಿ ಎತ್ತುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ

  • ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರಸ್ತಾವನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಒಳಗೊಂಡು ಮೂಲಭೂತ ಹಕ್ಕುಗಳನ್ನು ಅರ್ಥಮಾಡಿಸುವ ಕೆಲಸವಾಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.