ADVERTISEMENT

ಜ.26ರಿಂದ ಜನತಾ ಜಲಧಾರೆ ಅಭಿಯಾನ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 15:56 IST
Last Updated 7 ಜನವರಿ 2022, 15:56 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಜೆಡಿಎಸ್‌ಗೆ ಸಂಪೂರ್ಣ ಬಹುಮತದೊಂದಿಗೆ ಐದು ವರ್ಷಗಳ ಪೂರ್ಣಾವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನದಿಗಳ ನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರುವ ಭರವಸೆಯೊಂದಿಗೆ ಜನವರಿ 26ರಿಂದ ಜನತಾ ಜಲಧಾರೆ ಅಭಿಯಾನ ಆರಂಭಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.26ರಿಂದ ಆರಂಭವಾಗುವ ಅಭಿಯಾನ 2023ರ ಚುನಾವಣೆಯವರೆಗೂ ಮುಂದುವರಿಯಲಿದೆ. ನದಿ ಮೂಲಗಳಿರುವ 51 ಸ್ಥಳಗಳಿಗೆ ಯಾತ್ರೆಯ ಮೂಲಕ ಭೇಟಿ ನೀಡಲಾಗುವುದು’ ಎಂದರು.

ರಾಜ್ಯದ ಎಲ್ಲ ನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಳ್ಳಲು ಸಮಗ್ರ ಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವ ಮತ್ತು ರಾಜ್ಯದ ಉದ್ದಗಲಕ್ಕೆ ಕೃಷಿ ಚಟುವಟಿಕೆಗೆ ನೀರಾವರಿ ಕಲ್ಪಿಸುವ ಯೋಜನೆಗಳನ್ನು ಜೆಡಿಎಸ್‌ ಸಿದ್ಧಪಡಿಸಿದೆ. ಅವುಗಳೊಂದಿಗೆ ಜನರ ಎದುರು ಹೋಗಿ ಬೆಂಬಲ ಕೋರಲಾಗುವುದು ಎಂದರು.

ADVERTISEMENT

ಪಕ್ಷದ ಶಾಸಕರು, ಮಾಜಿ ಸಚಿವರು, ಹಿರಿಯ ಮುಖಂಡರ ನೇತೃತ್ವದಲ್ಲಿ 15 ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ನದಿ ಮೂಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಜಲ ಸಂಗ್ರಹಿಸಲಿವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗದಿದ್ದರೆ ಜ.26ಕ್ಕೆ ಆಂದೋಲನ ಆರಂಭಿಸುವುದು ಖಚಿತ. ಕೋವಿಡ್‌ ಹೆಚ್ಚಾದರೆ ಕೆಲವು ದಿನಗಳ ಕಾಲ ಮುಂದೂಡಲಾಗುವುದು ಎಂದು ವಿವರಿಸಿದರು.

ಜೆಡಿಎಸ್‌ಗೆ ಸೋಲು ಮತ್ತು ಗೆಲುವು ಹೊಸದಲ್ಲ. ಅನೇಕ ಚುನಾವಣೆಗಳಲ್ಲಿ ಸೋಲು, ಗೆಲುವು ನೋಡಿದ್ದೇವೆ. ಈಗ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದರೆ ಜನರ ಕೆಲಸ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಹೋರಾಟ ಮಾಡುತ್ತೇವೆ. ಯಾವ ರೀತಿಯಲ್ಲೂ ಮುಚ್ಚುಮರೆ ಮಾಡುವುದಿಲ್ಲ. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಜನರಲ್ಲಿ ಕೇಳುವುದಕ್ಕಾಗಿಯೇ ಈ ಯಾತ್ರೆ ಮಾಡುತ್ತೀದ್ದೇವೆ ಎಂದು ಹೇಳಿದರು.

‘ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆಗೆ ವಿರುದ್ಧವಾಗಿ ಈ ಕಾರ್ಯಕ್ರಮ ರೂಪಿಸಿಲ್ಲ. ಮೇಕೆದಾಟು ಜತೆಯಲ್ಲೇ ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲ ಯೋಜನೆಗಳೂ ಆಗಬೇಕು. ಅದಕ್ಕೆ ಪೂರಕವಾಗಿ ನಮ್ಮ ಹೋರಾಟ’ ಎಂದರು.

ಪಾದಯಾತ್ರೆಯಿಂದ ನೀರು ಸಿಗುವುದಿಲ್ಲ: ಕಾಂಗ್ರೆಸ್‌ನ ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ ಅನುಮತಿ ಸಿಗುವುದಿಲ್ಲ. ಬೆಂಗಳೂರಿಗೆ ನೀರೂ ಸಿಗುವುದಿಲ್ಲ. ಇವರ ಪಾದಯಾತ್ರೆಯಿಂದ ಆ ಭಾಗದ ಜನರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕುಮಾರಸ್ವಾಮಿ ಹೇಳಿದರು.

‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’

‘ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಹಿಂಬಾಲಕರು ಎಷ್ಟು ಕೆರೆ ನುಂಗಿದ್ದಾರೆ ಎಂಬುದು ಗೊತ್ತಿದೆ.ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುವೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಸುಮ್ಮನೆ ರಾಜಕೀಯಕ್ಕೆ ಬಿಟ್‌ ಕಾಯಿನ್‌,ಶೇಕಡ40ರಷ್ಟು ಲಂಚ ಎಂದು ಮಾತನಾಡುತ್ತಿದ್ದಾರೆ.ಯಾವ ಸಾಕ್ಷ್ಯವನ್ನೂ ನೀಡುತ್ತಿಲ್ಲ. ಇವರು ಅಧಿಕಾರದಲ್ಲಿದ್ದಾಗ ಲಂಚ ಇರಲಿಲ್ಲವೆ’ ಎಂದು ಕೇಳಿದರು.

ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.ಚರ್ಚೆಯ ಫಲವೇನು ಎಂಬುದನ್ನು ಬಹಿರಂಗಪಡಿಸಲಿ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.