ADVERTISEMENT

ಕೊಡಗಿನಲ್ಲಿ ಬಂದೋಬಸ್ತ್‌ ಹೆಚ್ಚಳ

ಎರಡನೇ ದಿನವೂ ವ್ಯಾಪಾರ ಸ್ಥಗಿತಗೊಳಿಸಿದ ಮುಸ್ಲಿಂ ವರ್ತಕರು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 10:36 IST
Last Updated 21 ಡಿಸೆಂಬರ್ 2019, 10:36 IST
ಮಡಿಕೇರಿಯಲ್ಲಿ ಮುಸ್ಲಿಂ ವರ್ತಕರ ಅಂಗಡಿಗಳು ಶನಿವಾರವೂ ಬಾಗಿಲು ಮುಚ್ಚಿದ್ದವು
ಮಡಿಕೇರಿಯಲ್ಲಿ ಮುಸ್ಲಿಂ ವರ್ತಕರ ಅಂಗಡಿಗಳು ಶನಿವಾರವೂ ಬಾಗಿಲು ಮುಚ್ಚಿದ್ದವು   

ಮಡಿಕೇರಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ, ಪ್ರತಿಭಟನೆ ನಡೆಯುವ ಸಾಧ್ಯತೆಯಿದ್ದು ಸೂಕ್ಷ್ಮ ಪ್ರದೇಶವಾದ ಕೊಡಗಿನಲ್ಲಿ ಬಂದೋಬಸ್ತ್‌ ಹೆಚ್ಚಿಸಲಾಗಿದೆ.

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಸಿದ್ದಾಪುರ, ನೆಲ್ಯಹುದಿಕೇರಿ, ಕುಶಾಲನಗರದ ಆಯಾಕಟ್ಟಿನ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ನಗರದ ಜನರಲ್‌ ತಿಮ್ಮಯ್ಯ ವೃತ್ತ, ಚೌಕಿ, ಮಹಾದೇವಪೇಟೆ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ADVERTISEMENT

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಘಟನೆ ಖಂಡಿಸಿ ಸಿದ್ದಾಪುರ, ನೆಲ್ಯಹುದಿಕೇರಿ, ಸುಂಟಿಕೊಪ್ಪ, ವಿರಾಜಪೇಟೆಯಲ್ಲಿ ಮುಸ್ಲಿಂ ವರ್ತಕರು ಶುಕ್ರವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿದ್ದರು. ಈ ಪಟ್ಟಣಗಳಲ್ಲಿ ಶನಿವಾರ ವಹಿವಾಟು ಸಹಜವಾಗಿತ್ತು. ಆದರೆ, ಮಡಿಕೇರಿಯಲ್ಲಿ ಕೆಲವು ಮುಸ್ಲಿಂ ವರ್ತಕರು 2ನೇ ದಿನವಾದ ಶನಿವಾರವೂ ಘಟನೆ ಖಂಡಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಉಳಿದಂತೆ ಜನಜೀವನ ಹಾಗೂ ವಾಹನ ಸಂಚಾರ ಸಹಜವಾಗಿತ್ತು. ಅಂಗಡಿಗಳ ಮುಂದೆ ಘಟನೆ ಖಂಡಿಸಿ ಬಿತ್ತಿಪತ್ರ ಅಂಟಿಸಲಾಗಿತ್ತು.

ಕೊಡಗು– ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಸಂಪಾಜೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಇಂಟರ್‌ನೆಟ್‌ ಸೇವೆ ವ್ಯತ್ಯಯವಾಗಿದೆ.

ಬಸ್‌ ಸಂಚಾರ ಆರಂಭ:ಶನಿವಾರ ಬೆಳಿಗ್ಗೆಯಿಂದ ಸುಳ್ಯ, ಸಂಪಾಜೆ ಕಡೆಯಿಂದ ಮಡಿಕೇರಿಗೆ ಕೆಎಸ್ಆರ್‌ಟಿಸಿ ಬಸ್‌ ಸೇವೆ ಆರಂಭಗೊಂಡಿತ್ತು. ವಿವಿಧ ಕೆಲಸಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದ್ದವರು ಶನಿವಾರ ಬೆಳಿಗ್ಗೆ ಮಡಿಕೇರಿಗೆ ವಾಪಸ್ಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.