ADVERTISEMENT

ಗಾಂಧಿನಗರ ಕ್ಷೇತ್ರ: ಕಾಂಗ್ರೆಸ್ ಭದ್ರಕೋಟೆಗೆ ನುಗ್ಗಲು ಬಿಜೆಪಿ, ಜೆಡಿಎಸ್‌ ಯತ್ನ

ಎಸ್.ರವಿಪ್ರಕಾಶ್
Published 3 ಫೆಬ್ರುವರಿ 2023, 2:01 IST
Last Updated 3 ಫೆಬ್ರುವರಿ 2023, 2:01 IST
ದಿನೇಶ್ ಗುಂಡೂರಾವ್‌, ಹಾಲಿ ಶಾಸಕ, ಕಾಂಗ್ರೆಸ್‌
ದಿನೇಶ್ ಗುಂಡೂರಾವ್‌, ಹಾಲಿ ಶಾಸಕ, ಕಾಂಗ್ರೆಸ್‌   

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರ ವಾಣಿಜ್ಯ ಚಟುವಟಿಕೆಗಳಿಂದ ಕೂಡಿರುವ, ಸದಾ ಜನಸಂದಣಿಯಿಂದ ಗಿಜಿಗುಡುವ ಕ್ಷೇತ್ರ. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಇಲ್ಲಿ ದಿನೇಶ್‌ ಗುಂಡೂರಾವ್‌ ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ.

ಅವರು 5 ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಇವರನ್ನು ಸೋಲಿಸಿ ಕ್ಷೇತ್ರವನ್ನು ಗೆದ್ದುಕೊಳ್ಳುವ ಛಲವನ್ನು ಬಿಜೆಪಿ ತೊಟ್ಟಿದೆ. ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ವಿ.ನಾರಾಯಣಸ್ವಾಮಿ ಅವರಿಗೆ ಜೆಡಿಎಸ್‌ ಪಕ್ಷ ಟಿಕೆಟ್‌ ಘೋಷಿಸಿದೆ. ಕಳೆದ ಬಾರಿ ಅವರು 32 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು.

ಕಾಂಗ್ರೆಸ್‌ನಲ್ಲಿ ದಿನೇಶ್ ಅವರಿಗೆ ಪ್ರತಿಸ್ಪರ್ಧಿ ಇಲ್ಲ. ಆ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳೂ ಇಲ್ಲ. ಎದುರಾಳಿ ಪಕ್ಷಗಳಿಂದ ದಿನೇಶ್‌ ಅವರನ್ನು ಸೋಲಿಸುವ ಪ್ರಯತ್ನ ಈವರೆಗೂ ಯಶಸ್ವಿ ಆಗಿಲ್ಲ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಎಂದೇ ಪರಿಗಣಿಸಲಾದ ಪಿ.ಸಿ.ಮೋಹನ್ ಅವರು ಎರಡು ಬಾರಿ ಇವರ ಎದುರು ಸ್ಪರ್ಧಿಸಿ ಸೋತಿದ್ದಾರೆ. ಮೋಹನ್ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದಾರೆ.

ADVERTISEMENT

ಬಿಜೆಪಿಯಿಂದ ಮಾಜಿ ಸಚಿವ ರಾಮಚಂದ್ರೇಗೌಡರ ಪುತ್ರ ಸಪ್ತಗಿರಿಗೌಡ, ಮಾಜಿ ಕಾರ್ಪೊರೇಟರ್‌ ಶಿವಕುಮಾರ್‌, ಮಾಜಿ ಸಚಿವ ಮಾಲೂರಿನ ಕೃಷ್ಣಯ್ಯ ಶೆಟ್ಟಿ ಅವರು ಟಿಕೆಟ್‌ ಆಕಾಂಕ್ಷಿಗಳು. ಕೃಷ್ಣಯ್ಯ ಶೆಟ್ಟಿ ಕ್ಷೇತ್ರದ ಉದ್ದಗಲಕ್ಕೂ ಪ್ರಚಾರವನ್ನೂ ನಡೆಸಿದ್ದಾರೆ. ಅಲ್ಲದೇ, ವೈಕುಂಠ ಏಕಾದಶಿ ವೇಳೆ ಪ್ರಮುಖ ದೇಗುಲಗಳಲ್ಲಿ ಲಾಡೂ ಹಂಚಿದ್ದೂ ಅಲ್ಲದೇ, ಕೆಲವು ಹಳೆ ತಂತ್ರಗಳನ್ನೂ (ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರಿಗೆ ಪ್ರವಾಸ) ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಕೊಳೆಗೇರಿ ಮತಗಳು ಹೆಚ್ಚಿನ ಪ್ರಮಾಣದಲ್ಲಿದೆ. ಈ ಮತಗಳನ್ನೇ ಕಾಂಗ್ರೆಸ್‌ ನೆಚ್ಚಿಕೊಂಡಿದೆ. ಬಿಜೆಪಿ ಒಮ್ಮೆಯೂ ಕ್ಷೇತ್ರದಲ್ಲಿ ಗೆದ್ದಿಲ್ಲ. ಹಿಂದೆ ಜನತಾಪಕ್ಷ ಎರಡು ಬಾರಿ, ಎಐಎಡಿಎಂಕೆ ಒಮ್ಮೆ ಈ ಕ್ಷೇತ್ರವನ್ನು ಗೆದ್ದಿತ್ತು.

ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳೀಪುರಂ, ಚಿಕ್ಕಪೇಟೆ, ಕಾಟನ್ ಪೇಟೆ, ಬಿನ್ನಿಪೇಟೆಯನ್ನು ಈ ಕ್ಷೇತ್ರ ಒಳಗೊಂಡಿದೆ. ಹಳೆಯ ಬೆಂಗಳೂರಿನ ಭಾಗವಾಗಿರುವ ಈ ಕ್ಷೇತ್ರದಲ್ಲಿ ಬಡಾವಣೆಗಳು ಒತ್ತೊತ್ತಾಗಿವೆ. ರಸ್ತೆಗಳು, ಅಂಗಡಿಗಳು ಇನ್ನೂ ಹಳೇ ಸ್ವರೂಪದಲ್ಲೇ ಇದ್ದು, ಆಧುನಿಕ ಬೆಂಗಳೂರಿನ ಲಕ್ಷಣ ಪಡೆದಿಲ್ಲ. ಕ್ಷೇತ್ರಕ್ಕೆ ಅಭಿವೃದ್ಧಿಯ ಮೂಲಕ ಹೊಸ ಸ್ವರೂಪದ ಸ್ಪರ್ಶ ನೀಡುವುದು ಜನಪ್ರತಿನಿಧಿಗಳಿಗೆ ಸವಾಲೇ ಆಗಿದೆ. ಇಲ್ಲಿ ರಸ್ತೆ ಅಗಲ ಮಾಡಲು ಸಾಧ್ಯವಿಲ್ಲ, ವ್ಯಾಪಾರಿಗಳು ಮತ್ತು ನಿವಾಸಿಗಳಿಂದ ಪ್ರತಿರೋಧ ಬರುತ್ತದೆ. ಹೀಗಾಗಿ ಕ್ಷೇತ್ರದ ಎಲ್ಲೆಡೆ ಕಿರಿದಾದ ರಸ್ತೆಗಳಿಗೆ ತೇಪೆ ಹಾಕುವ ಕೆಲಸವೇ ಆಗುತ್ತಿದೆ. ಮತ್ತೊಂದೆಡೆ ಕೊಳೆಗೇರಿ ನಿವಾಸಿಗಳಿಗೆ ಬೇರೆಡೆ ಮನೆ ಕಟ್ಟಿಕೊಟ್ಟರೂ, ಹೋಗಲು ತಯಾರಿಲ್ಲ. ಇವೆರಡೂ ವರ್ಗಗಳನ್ನು ಎದುರು ಹಾಕಿಕೊಳ್ಳಲು
ಜನಪ್ರತಿನಿಧಿಗಳು ಸಿದ್ಧರಿಲ್ಲ.

Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.