ADVERTISEMENT

ಟ್ರಕ್‌ನಲ್ಲಿ ಸಾಗಿಸುತ್ತಿದ್ದ 500 ಕೆ.ಜಿ ಗಾಂಜಾ ಜಪ್ತಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 16:49 IST
Last Updated 26 ಮಾರ್ಚ್ 2021, 16:49 IST
ಗಾಂಜಾ–ಸಾಂದರ್ಭಿಕ ಚಿತ್ರ
ಗಾಂಜಾ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಡಿಶಾದಿಂದ ನಗರಕ್ಕೆ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ₹ 1 ಕೋಟಿ ಮೌಲ್ಯದ 500 ಕೆ.ಜಿ ಗಾಂಜಾವನ್ನು ಕೆ.ಆರ್.ಪುರ ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ರಾಜಸ್ಥಾನ ಜೋಧಪುರದ ದಯಾಲ್‌ರಾಮ್ (38), ಪೂನರಾಮ್ (24) ಹಾಗೂ ಬುದ್ದಾರಾಮ್ (23) ಬಂಧಿತರು. ಅವರೆಲ್ಲರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಒಡಿಶಾದಲ್ಲಿರುವ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪಿಗಳು, ಅಲ್ಲಿಂದ ಗಾಂಜಾವನ್ನು ಖರೀದಿಸಿ ತಂದು ನಗರಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಪ್ರತ್ಯೇಕ ಕ್ಯಾಬಿನ್‌ನಲ್ಲಿ ಗಾಂಜಾ: ‘ಆರೋಪಿಗಳು ರಾಜಸ್ಥಾನ ನೋಂದಣಿ ಸಂಖ್ಯೆ ಟ್ರಕ್‌ನಲ್ಲಿ ಗಾಂಜಾ ಇಟ್ಟುಕೊಂಡು ಗ್ರಾಹಕರಿಗೆ ನೀಡಲು ಹೊರಟಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಅಧಿಕಾರಿ ಹೇಳಿದರು.

‘ಆರಂಭದಲ್ಲಿ ಟ್ರಕ್‌ನಲ್ಲಿ ಶೋಧ ಮಾಡಿದಾಗ ಗಾಂಜಾ ಸಿಕ್ಕಿರಲಿಲ್ಲ. ಚಾಲಕನ ಆಸನದ ಹಿಂಭಾಗದಲ್ಲಿ ಪ್ರತ್ಯೇಕ ಕ್ಯಾಬಿನ್‌ ಮಾಡಿದ್ದ ಆರೋಪಿಗಳು, ಅಲ್ಲಿಯೇ 82 ಬಂಡಲ್‌ಗಳಲ್ಲಿ ಗಾಂಜಾ ಬಚ್ಚಿಟ್ಟು ಸಾಗಿಸುತ್ತಿದ್ದರು. ಅದನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

‘ಹಲವು ದಿನಗಳಿಂದ ನಡೆಯುತ್ತಿದ್ದ ಗಾಂಜಾ ಸಾಗಣೆ ಹಾಗೂ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರಿಗೆ ನಗರ ಪೊಲೀಸ್ ಕಮಿಷನರ್ ಅವರು ₹80 ಸಾವಿರ ಬಹುಮಾನ ಘೋಷಿಸಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.