ADVERTISEMENT

ಗೌರಿ ಹತ್ಯೆ: ಚಾರ್ಜ್‌ಶೀಟ್‌ನಲ್ಲಿ ‘ಸನಾತನ ಸಂಸ್ಥೆ’ ಹೆಸರು       

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 14:36 IST
Last Updated 23 ನವೆಂಬರ್ 2018, 14:36 IST
   

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ 9,235 ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಎಸ್‌ಐಟಿ, ‘ಆರೋಪಿಗಳ ಪೈಕಿ ಕೆಲವರು ಸನಾತನ ಸಂಸ್ಥೆ ಜತೆ ನಂಟು ಹೊಂದಿದ್ದಾರೆ’ ಎಂದು ಹೇಳಿದೆ.

ಎಸ್‌ಐಟಿ ಪೊಲೀಸರು ಶುಕ್ರವಾರ ಸಂಜೆ ಚಾರ್ಜ್‌ಶೀಟ್‌ ಸಂಪುಟಗಳನ್ನು ಟ್ರಕ್‌ನಲ್ಲಿ ಹೊತ್ತು ತಂದು, ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಿದರು. ‘ಈ ಕೃತ್ಯದಲ್ಲಿ ಸನಾತನ ಸಂಸ್ಥೆ ನೇರವಾಗಿ ಭಾಗಿಯಾಗಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಬಂಧಿಸಲಾಗಿರುವ ಆರೋಪಿಗಳ ಪೈಕಿ ಕೆಲವರು ಆ ಸಂಸ್ಥೆಯ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ’ ಎಂದು ಹೇಳಲಾಗಿದೆ.

ಹಿಂದೂ ರಾಷ್ಟ್ರದ ಆಶಯ: ‘ನಾವೆಲ್ಲ ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದೆವು. 2023ರ ವೇಳೆಗೆ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಆಶಯವಿತ್ತು. ಅದಕ್ಕೆ ಅಡ್ಡಿಯಾಗಿದ್ದ ಎಲ್ಲರನ್ನೂ ಮುಗಿಸುವ ಪಣ ತೊಟ್ಟಿದ್ದೆವು’ ಎಂಬ ಆರೋಪಿಗಳ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿದೆ.

ADVERTISEMENT

ಜಾಲದ ಸದಸ್ಯರು: ಮಹಾರಾಷ್ಟ್ರದ ಅಮೋಲ್‌ ಕಾಳೆ ಅಲಿಯಾಸ್ ಭಾಯಿಸಾಬ್, ಅಮಿತ್ ದೆಗ್ವೇಕರ್ ಅಲಿಯಾಸ್ ಪ್ರದೀಪ್ ಮಹಾಜನ್, ಸುಧನ್ವ ಗೊಂದಾಳೇಕರ್, ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್, ಶರದ್ ಕಳಾಸ್ಕರ್, ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗಾರ್ಕರ್, ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್, ಮಡಿಕೇರಿಯ ರಾಜೇಶ್ ಬಂಗೇರಾ, ಸುಳ್ಯದ ಮೋಹನ್ ನಾಯಕ್, ಶಿಕಾರಿಪುರದ ಬಿ.ಆರ್.ಸುಜಿತ್ ಅಲಿಯಾಸ್ ಪ್ರವೀಣ್, ಮದ್ದೂರಿನ ನವೀನ್ ಅಲಿಯಾಸ್ ಹೊಟ್ಟೆ ಮಂಜ, ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ವಿಜಯಪುರದ ಪರಶುರಾಮ ವಾಘ್ಮೋರೆ ಅಲಿಯಾಸ್ ಬಿಲ್ಡರ್, ಕುಣಿಗಲ್ ಎಚ್‌.ಎಲ್.ಸುರೇಶ್, ಬೆಳಗಾವಿಯ ಭರತ್ ಕುರ್ನೆ, ಕುಣಿಗಲ್‌ನ ಸುರೇಶ್. ಕಿಂಗ್‌ಪಿನ್ ನಿಹಾಲ್ ಅಲಿಯಾಸ್ ದಾದಾ (ಇನ್ನೂ ಸಿಕ್ಕಿಲ್ಲ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.