ADVERTISEMENT

ಗೌರಿ ಹತ್ಯೆ ಕೃತ್ಯ ಒಪ್ಪಿಕೊಳ್ಳಲು ಹಣದ ಆಮಿಷವೊಡ್ಡಿದ ಎಸ್‌ಐಟಿ: ವಾಘ್ಮೋರೆ ಆರೋಪ‍

'ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ'

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 13:52 IST
Last Updated 29 ಸೆಪ್ಟೆಂಬರ್ 2018, 13:52 IST
ಪರಶುರಾಮ ವಾಘ್ಮೋರೆ
ಪರಶುರಾಮ ವಾಘ್ಮೋರೆ   

ಬೆಂಗಳೂರು: ‘ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ವಿಚಾರಣೆ ನೆಪದಲ್ಲಿ ಚಿತ್ರಹಿಂಸೆ ನೀಡಿರುವ ಎಸ್ಐಟಿ ಪೊಲೀಸರು, ‘ನೀನೇ ಗುಂಡು ಹಾರಿಸಿದ್ದು ಎಂದು ಒಪ್ಪಿಕೊಂಡರೆ ₹ 25 ಲಕ್ಷದಿಂದ ₹ 30 ಲಕ್ಷವನ್ನು ನಿನ್ನ ಪೋಷಕರಿಗೆ ತಲುಪಿಸುತ್ತೇವೆ’ ಎಂದು ಆಮಿಷವೊಡ್ಡಿದ್ದಾರೆ...‘

ಇದು, ಪ್ರಕರಣದ ಆರೋಪಿ ವಿಜಯಪುರದ ಪರಶುರಾಮ ವಾಘ್ಮೋರೆಯ ಆರೋಪ.

ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದರಿಂದ ವಾಘ್ಮೋರೆ ಸೇರಿ ಉಳಿದೆಲ್ಲ ಆರೋಪಿಗಳನ್ನು ವಿಶೇಷ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದರು.

ADVERTISEMENT

ನಂತರ, ಆರೋಪಿಗಳನ್ನು ನ್ಯಾಯಾಲಯದಿಂದ ಹೊರಗೆ ಕರೆತಂದ ಪೊಲೀಸರು,ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲುಜೀಪು ಹತ್ತಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ನೋಡಿದ ವಾಘ್ಮೋರೆ, ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೇ ನಮ್ಮನ್ನು ತಂದು ಟಾರ್ಗೆಟ್ ಮಾಡುತ್ತಿದ್ದಾರೆ. ಅದು ಏಕೆ ಎಂಬುದು ಗೊತ್ತಿಲ್ಲ’ ಎಂದು ಕೂಗಿ ಹೇಳಿದ.

‘ಸುಖಾಸುಮ್ಮನೇ ನಮ್ಮನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಒಬ್ಬ ಅಧಿಕಾರಿ, ಒಂದೇ ಸಮನೇ ಹೊಡೆಯುತ್ತಿದ್ದ. ಇನ್ನೊಬ್ಬರು, ಸಮಾಧಾನ ಮಾಡುತ್ತಿದ್ದರು. ಎಲ್ಲರೂ ಸೇರಿ, ‘ನೀನು ಕೃತ್ಯ ಒಪ್ಪಿಕೊಳ್ಳದಿದ್ದರೆ, ನಿಮ್ಮ ಅಣ್ಣ–ತಮ್ಮ ಹಾಗೂ ಸ್ನೇಹಿತರನ್ನು ತಂದು ಪ್ರಕರಣದಲ್ಲಿ ಸಿಕ್ಕಿಸುತ್ತೇವೆ‘ ಎಂದು ಹೇಳಿ ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಯಾರಿಗೂ ನಮ್ಮ ಮುಖಾನೂ ತೋರಿಸಿ ಕೊಟ್ಟಿಲ್ಲ. ಇಷ್ಟೆಲ್ಲ ಹೊಡೆದು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ. ಅವರೇ ಹೇಳಿಕೊಟ್ಟು, ಅದರಂತೆ ಹೇಳಿಸಿ ವಿಡಿಯೊ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ.

‘ಏನು ನಡೆಯುತ್ತಿದೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ದಿನವೂ ಪತ್ರಿಕೆ ನೋಡುತ್ತಿದ್ದೇವೆ. ಇಲ್ಲಿ ಇದ್ದಾರಲ್ಲ (ಜೀಪಿನಲ್ಲಿ ಪಕ್ಕದಲ್ಲೇ ಕುಳಿತಿದ್ದ ಆರೋಪಿಗಳನ್ನು ತೋರಿಸುತ್ತ), ಇವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ಇಲ್ಲಿ ಬಂದ ಮೇಲೆಯೇ ಇವರ ಪರಿಚಯ ಆಗಿದ್ದು’ ಎಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.