ADVERTISEMENT

ಬಾಕಿ ವಸೂಲಿ, ಗ್ರಾಹಕರ ಸಭೆ ಕಡ್ಡಾಯ

ಜೆಸ್ಕಾಂ ಅಧಿಕಾರಿಗಳಿಗೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ತಾಕೀತು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:35 IST
Last Updated 11 ಫೆಬ್ರುವರಿ 2019, 14:35 IST

ಕಲಬುರ್ಗಿ: ‘ಇನ್ನು ಮುಂದೆ ಪ್ರತಿ ತಿಂಗಳು ಗ್ರಾಮೀಣ ಮಟ್ಟದಲ್ಲಿ ವಿದ್ಯುತ್‌ ಗ್ರಾಹಕರ ಸಭೆ ಕರೆದು, ಕುಂದು– ಕೊರತೆ ಆಲಿಸಬೇಕು. ಅಲ್ಲಿನ ಅಂಶಗಳನ್ನು ಪರಿಗಣಿಸಿಯೇ ವಿದ್ಯುತ್‌ ದರ ಪರಿಷ್ಕರಣೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ತಾಕೀತು ಮಾಡಿದರು.

ವಿದ್ಯುತ್‌ ದರ ಪರಿಷ್ಕರಣೆ ಪ್ರಸ್ತಾವ ಕುರಿತು ನಗರದಲ್ಲಿ ಸೋಮವಾರ ನಡೆದ ಹೈದರಾಬಾದ್‌ ಕರ್ನಾಟಕ ಭಾಗದ ಗ್ರಾಹಕರ ಸಭೆ ನಡೆಸಿ ಅವರು ಮಾತನಾಡಿದರು.

‘ಸಭೆಯ ನಿರ್ಧಾರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು. ಆಗಲೇ ಜೆಸ್ಕಾಂನಲ್ಲಿ ಏನು ನಡೆಯುತ್ತಿದೆ ಎಂದು ಗ್ರಾಹಕರಿಗೆ ತಿಳಿಯುತ್ತದೆ. ಏಕಾಏಕಿ ದರ ಏರಿಸುವುದರಿಂದ ಗೊಂದಲಗಳು ಹುಟ್ಟಿಕೊಳ್ಳುತ್ತವೆ’ ಎಂದರು.

ADVERTISEMENT

‘ಬಿಲ್‌ ವಸೂಲಿಗೆ ಸರ್ಕಾರದ ಆದೇಶಕ್ಕಾಗಿ ಕಾಯಬೇಕೇನು? ಸ್ಥಳೀಯ ಸಂಸ್ಥೆಗಳು ಏತಕ್ಕಾಗಿ ಇವೆ? ಆಯಾ ಸ್ಥಳೀಯ ಸಂಸ್ಥೆಗಳಿಂದಲೇ ಅನುಮತಿ ಪಡೆದು, ಕಾಲಕಾಲಕ್ಕೆ ವಸೂಲಿ ಮಾಡಬಹುದು. ಅಗತ್ಯಬಿದ್ದರೆ ರೈತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಬಿಲ್‌ ವಸೂಲಿ ಮಾಡಿ’ ಎಂದು ತಿಳಿಸಿದರು.

₹ 75 ಕೋಟಿ ವ್ಯರ್ಥ:

ಇದಕ್ಕೂ ಮುನ್ನ ಅಹವಾಲು ಸಲ್ಲಿಸಿದ ಆರ್‌ಟಿಐ ಕಾರ್ಯಕರ್ತ ಸಿದ್ರಾಮಪ್ಪ, ‘ಜೆಸ್ಕಾಂನ ಯಾವುದೇ ಕಾಮಗಾರಿಗೂ ಗುತ್ತಿಗೆದಾರರೇ ವಸ್ತುಗಳನ್ನು ಖರೀದಿ ಮಾಡಬೇಕು ಎಂಬ ನಿಯಮವಿದೆ. ಕಳೆದೆರಡು ವರ್ಗಳಲ್ಲಿ 6,000ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕಗಳನ್ನು ಗುತ್ತಿಗೆದಾರರು ಖರೀದಿಸಿದ್ದಾರೆ. ಆದರೆ, ಯಾವುದೂ ಜನೋಪಯೋಗಿ ಆಗಿಲ್ಲ. ಇದರಿಂದ ಕಂಪನಿಗೆ ₹ 75 ಕೋಟಿ ನಷ್ಟವಾಗಿದೆ. ಈ ರೀತಿ ಮಾಡುವವರಿಗೆ ದಂಡ ಹಾಕಬೇಕು’ ಎಂದು ಆಗ್ರಹಿಸಿದರು.

ಬಸವರಾಜ ಶಹಾಬಾದ್‌ ಮಾತನಾಡಿ, ‘ಹಳ್ಳಿಗಳಲ್ಲಿ ಹೇಳದೇ–ಕೇಳದೇ ವಿದ್ಯುತ್‌ ಕಡಿತ ಮಾಡುತ್ತಾರೆ. ರೈತರ ಪಂಪ್‌ಸೆಟ್‌ಗಳಿಗೆ ಕೇವಲ 2 ತಾಸು ಮಾತ್ರ ತ್ರಿ–ಫೇಸ್‌ ವಿದ್ಯುತ್‌ ನೀಡುತ್ತಿದ್ದಾರೆ. ಇತರ ಗ್ರಾಹಕರಿಗಿಂತ ಪಂಪ್‌ಸೆಟ್‌ಗಳಿಗೆ ಏಕೆ ಹೆಚ್ಚಿನ ಪರಿಷ್ಕರಣೆ ಮಾಡಿದ್ದೀರಿ? ಯಾವ ಆಧಾರದ ಮೇಲೆ ದರ ಹೆಚ್ಚಿಸಲಾಗಿದೆ ಎಂಬುದನ್ನು ತಿಳಿಸಬೇಕು’ ಎಂದು ಆಗ್ರಹಿಸಿದರು.

ನೀರಿನ ಪಂಪ್‌ಸೆಟ್‌ಗೂ ಮೀಟರ್‌:

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕ ನೀರು ಪೂರೈಕೆಗೆ ಬಳಸುವ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬೇಕು. ಇದರಿಂದ ಸೋರಿಕೆ ತಡೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ‘ಸರ್ಕಾರಿ ನೀರು’ ಎಂಬ ಕಾರಣಕ್ಕೆ ಜನ ಬೇಕಾಬಿಟ್ಟಿ ಪೋಲು ಮಾಡುತ್ತಾರೆ ಎಂದರು.

ಅನಧಿಕೃತ ಸಂಪರ್ಕಗಳು:

‘ಬಹಮನಿ ಕೋಟೆಯೊಳಗೆ 196 ಮನೆಗಳಿವೆ. ಎಲ್ಲವೂ ಅನಧಿಕೃತ. ಇದು ಗೊತ್ತಿದ್ದರೂ ಏಕೆ ಆ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಿದ್ದೀರಿ? ಇಂಥ ಅನಧಿಕೃತ ಸಂಪರ್ಕಗಳನ್ನು ಕಡಿತ ಮಾಡಿದರೆ ಹಾನಿಯಾಗುವುದಿಲ್ಲ’ ಎಂದು ಕಾರ್ಯಕರ್ತರೊಬ್ಬರು ಸಲಹೆ ಕೊಟ್ಟರು.

‘ಲಾಭದಾಯಕ ಉದ್ದೇಶ ಹೊಂದಿದ ಯಾವುದೇ ಕಂಪನಿ ಹಾನಿ ಅನುಭವಿಸಿದರೆ ಅದನ್ನು ಮುಚ್ಚುತ್ತಾರೆ. ಜೆಸ್ಕಾಂ ಪದೇಪದೇ ಹಾನಿಯಲ್ಲಿದೆ ಎಂದಾದರೆ ಮುಚ್ಚಿಬಿಡುವುದು ಉಚಿತ ಎಂದು ಸುಬೇದಾರ್‌ ಹೇಳಿದರು.

‘ಕಂದಾಯ ಕೊರತೆಯನ್ನು ಸಿಬ್ಬಂದಿ ಮೇಲೆ ಹಾಕಿ ಅಥವಾ ಸರ್ಕಾರದಿಂದ ವಸೂಲಿ ಮಾಡಿ’ ಎಂದೂ ತಿಳಿಸಿದರು.

ಆಯೋಗದ ಸದಸ್ಯರಾದ ಎಚ್‌.ಡಿ. ಅರುಣಕುಮಾರ, ಎಚ್‌.ಎಂ. ಮಂಜುನಾಥ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ರಾಘಪ್ರಿಯಾ, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಮುಖ್ಯಾಂಶ
2017ರ ಸಭೆಯಲ್ಲಿ ಚರ್ಚಿಸಿದ ಅಂಶಗಳ ಅನುಷ್ಠಾನಕ್ಕೆ ಆಗ್ರಹ
ಎಲ್‌ಇಡಿ ಬಲ್ಬ್‌, ಸೌರ ವಿದ್ಯುತ್‌ ಬಳಕೆ ಹೆಚ್ಚಿಸಲು ಸಲಹೆ
ತಂತ್ರಜ್ಞಾನ ಹೆಚ್ಚಿದರೂ ವಿದ್ಯುತ್‌ ಸೋರಿಕೆ– ಬೇಸರ

ಅಂಕಿ–ಅಂಶ (ಹೈ.ಕ)
* 289 ಒಟ್ಟು ವಿದ್ಯುತ್‌ ವಿತರಣಾ ಕೇಂದ್ರಗಳು
* 98,012 ಪರಿವರ್ತಕಗಳ ಸಂಖ್ಯೆ
* 30.27 ಲಕ್ಷ ಒಟ್ಟು ಗ್ರಾಹಕರ ಸಂಖ್ಯೆ
* ₹ 19 ಕೋಟಿ ಜಾಗ್ರತ ದಳಗಳು ವಸೂಲಿ ಮಾಡಿದ ವರ್ಷದ ದಂಡ


ವಿದ್ಯುತ್‌ ನೀಡಬೇಕಾದ ಅವಧಿ
ನಗರ/ಪಟ್ಟಣ; 24 ತಾಸು
ಕೈಗಾರಿಕಾ ಫೀಡರ್‌; 24 ತಾಸು
ಕುಡಿಯುವ ನೀರು; 24 ತಾಸು
ನಿರಂತರ ಜ್ಯೋತಿ; 24 ತಾಸು
ಗ್ರಾಮೀಣ ನೀರಾವರಿ ಪಂಪ್‌ಸೆಟ್‌; 7 ತಾಸು(ತ್ರಿ–ಫೇಸ್‌)
ಗ್ರಾಮೀಣ ನೀರಾವರಿ ಪಂಪ್‌ಸೆಟ್‌; 9 ತಾಸು(ಸಿಂಗಲ್‌–ಫೇಸ್‌)
ಪ್ರತ್ಯೇಕ ನೀರಾವರಿ ಪಂಪ್‌ಸೆಟ್‌: 7 ತಾಸು

2018ರ ಬಾಕಿ (₹ ಕೋಟಿಗಳಲ್ಲಿ)
ಗ್ರಾಮೀಣ ನೀರು ಸರಬರಾಜು;203.67
ನಗರ ನೀರು ಸರಬರಾಜು;52.26
ಬೀದಿ ದೀಪಗಳ ಬಿಲ್‌ ಮೊತ್ತ;193.74
ನೀರಾವರಿ ಪಂಪ್‌ಸೆಟ್‌;706.79
ಏತನೀರಾವರಿ ಯೋಜನೆ;26.39
ಬಾಕಿ ಇರುವ ಸಹಾಯಧನ;1,055.73
ಸರ್ಕಾರದ ಇತರ ಬಾಕಿ;207
ಒಟ್ಟು ಜೆಸ್ಕಾಂಗೆ ಬರಬೇಕಾದ ಬಾಕಿ;2,445.59

ದಾಲ್‌ಮಿಲ್‌ಗಳಿಗೆ ರಿಯಾಯಿತಿ ನೀಡಿ
ದಾಲ್‌ಮಿಲ್‌ಗಳು ತೀವ್ರ ಸಂಕಷ್ಟದಲ್ಲಿವೆ. ಈಗ ವಿದ್ಯುತ್‌ ದರ ಹೆಚ್ಚಳ ಮಾಡಿದರೆ ಮತ್ತಷ್ಟು ಕುಸಿಯಲಿವೆ. ಈ ಮಿಲ್‌ಗಳು ಜನವರಿಯಿಂದ ಏಪ್ರಿಲ್‌ವರೆಗೆ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಆದ್ದರಿಂದ ಹಂಗಾಮು ಅವಧಿಯಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಬೇಕು ಎಂದು ಶರಣಬಸಯ್ಯ ಆಗ್ರಹಿಸಿದರು.

ಜಾಗೃತಿ ಮೂಡಿಸಿದ್ದೀರಾ?
ಬಿಲ್‌ ಬಾಕಿ ಉಳಿಯಲು ಹಾಗೂ ವಿದ್ಯುತ್‌ ಸೋರಿಕೆ ಆಗಲು ಗ್ರಾಹಕರ ಅರಿವಿನ ಕೊರತೆಯೇ ಕಾರಣ. ವಿದ್ಯುತ್‌ ಉತ್ಪಾದನೆಗೆ ಬಳಸುವ ದುಡ್ಡು ನಮ್ಮದೇ, ಸೋರಿಕೆಯಾದಾಗ ಹಾನಿ ಆಗುವುದೂ ನಮಗೇ ಹೊರತು ಕಂಪನಿಗೆ ಅಲ್ಲ ಎಂಬುದನ್ನು ತಿಳಿಸಬೇಕಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಯಾವತ್ತೂ ಅರಿವು, ಜಾಗೃತಿ ಮೂಡಿಸಿಲ್ಲ. ಇನ್ನಾದರೂ ಜಾಗೃತಿಗೆ ಕ್ರಮ ಕೈಗೊಳ್ಳಿ ಎಂದು ರೈತ ಮುಖಂಡ ಮಲ್ಲನಗೌಡ ಪಾಟೀಲ ಆಗ್ರಹಿಸಿದರು.

ನಮ್‌ ಬಾಯಾಗ್‌ ಮಣ್‌ ಹಾಕ್ರಿ..!
‘ಜೆಸ್ಕಾಂಗೆ ನಿರೀಕ್ಷಿತ ಆದಾಯ ಬಂದಿಲ್ಲ ಎಂಬ ಕಾರಣಕ್ಕೆ ದರ ಹೆಚ್ಚಿಸಲು ಮುಂದಾಗಿದೆ. ಜನರಿಗೆ ನಿರೀಕ್ಷಿತ ಸೇವೆ ಸಿಗದಾಗ ನಾವು ನಿಮಗೇನು ಮಾಡಬೇಕು? ನೀವೇನು ಕಂಪನಿಗೆ ಲಾಭ ಮಾಡಲು ಇದ್ದೀರೋ ಜನರ ಸೇವೆ ಮಾಡಲು ಇದ್ದೋರೋ?’ ಎಂದು ವೆಂಕಟರಾವ್‌ ಎಂಬುವವರು ಹರಿಹಾಯ್ದರು.

‘ರೇಟ್‌ ಹೆಚ್‌ ಮಾಡುಕ್ಕಿಂತ ನಮ್‌ ಬಾಯಾಗ್‌ ಮಣ್‌ ಹಾಕ್ರಿ...’ ಎಂದೂ ಕಿಡಿಕಾರಿದರು. ‘ಕಿಲ್ಲಿ ನೋಡ್ರಿ ಸರಾ. ನಾ ಸೀರಿಯಸ್ಸಾಗಿ ಹೇಳಕತ್ತೇನ್‌. ಬೇಕಾದ್ರ ಯಾಡ್‌ ಬಡದ್‌ ಹೊರಗ್‌ ಹಾಕ್ರಿ ನನ್ನ. ಯಾವ್ನೋ ವಿದ್ಯುತ್‌ ಕಳ್ಳತನ ಮಾಡ್ತಾನ ಅಂದ್ರ ಅವನ್ನ ಹಿಡ್ಕೊಂಡ್‌ ಬರ್ರಿ. ಅವನ್‌ ಪಾಪಾ ನಮ್‌ ಮ್ಯಾಲ್ಯಾಕ್‌ ಹಾಕ್ಕೀರಿ?’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.