ADVERTISEMENT

ಆರ್‌ಎಸ್‌ಎಸ್ ಗುಲಾಮಗಿರಿಯಿಂದ ಹೊರ ಬನ್ನಿ: ಮುಖ್ಯಮಂತ್ರಿಗೆ ಮಹದೇವಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 22:19 IST
Last Updated 25 ಸೆಪ್ಟೆಂಬರ್ 2021, 22:19 IST
ಎಚ್‌.ಸಿ. ಮಹದೇವಪ್ಪ
ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ‘ಸಂವಿಧಾನದ ಬಲದಿಂದ ನೀವು ಮುಖ್ಯಮಂತ್ರಿ ಆಗಿದ್ದೀರಿ. ಆ ಅಂಶವನ್ನು ನೆನಪಿಟ್ಟುಕೊಂಡು ಆರೆಸ್ಸೆಸ್‌ ಗುಲಾಮಗಿರಿಯಿಂದ ಆದಷ್ಟು ಬೇಗ ಹೊರಗೆ ಬನ್ನಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ ಮುಖಂಡಎಚ್.ಸಿ. ಮಹದೇವಪ್ಪ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ, ‘ಮಕ್ಕಳ ಭವಿಷ್ಯಕ್ಕೆ ಒಳ್ಳೆಯದಾಗುವುದಿದ್ದರೆ ಆರೆಸ್ಸೆಸ್‌ ವಿಚಾರವನ್ನು ಈ ನೀತಿಯಲ್ಲಿ ಅಳವಡಿಸಿದರೆ ತಪ್ಪೇನು’ ಎಂದು ಮುಖ್ಯಮಂತ್ರಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಮಹದೇವಪ್ಪ, ‘ಇನ್ನೊಬ್ಬರನ್ನು ಗುಲಾಮಗಿರಿಗೆ ಹೋಲಿಸುವ ಮುನ್ನ ನಿಮ್ಮಂಥ ನೂರಾರು ಕೋಟಿ ಜನರಿಗೆ ಘನತೆಯ ಮತ್ತು ಸಮಾನತೆಯ ಬದುಕಿನ ವಾತಾವರಣವನ್ನು ನಿರ್ಮಿಸಿದ ಬಾಬಾ ಸಾಹೇಬರನ್ನು ನೆನೆಯಿರಿ’ ಎಂದಿದ್ದಾರೆ.

‘ಆರೆಸ್ಸೆಸ್‌ ಎಂದರೆ ರಾಷ್ಟ್ರೀಯತೆ. ಆರೆಸ್ಸೆಸ್‌ನಿಂದ ದೇಶಕ್ಕೆ ಒಳ್ಳೆಯದು ಆಗುತ್ತಿದೆ. ಕಾಂಗ್ರೆಸ್‌ಗೆ ಬೇಕಿರುವುದು ಮೆಕಾಲೆ ಶಿಕ್ಷಣ ಪದ್ಧತಿ, ಗುಲಾಮತನ’ ಎಂದು ಬಾಲಿಶವಾಗಿ ಮಾತನಾಡುತ್ತಾ ಸಿ.ಟಿ.ರವಿಯಂಥ ವ್ಯಕ್ತಿಯ ಮಟ್ಟಕ್ಕೆ ಬೊಮ್ಮಾಯಿ ಇಳಿದಿದ್ದಾರೆ. ಸದನದ ಚರ್ಚೆಯೇ ಇಲ್ಲದೆ, ತಜ್ಞರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಬಹುತ್ವದ ಆಶಯಗಳಿಗೆ ವಿರೋಧಿಯಾದ ಕಾಯ್ದೆಗಳನ್ನು ಏಕಾಏಕಿ ಜಾರಿ ಮಾಡಿದ್ದು ಯಾರ ಗುಲಾಮಗಿರಿಗೆ ಒಳಗಾಗಿ ಎಂಬುದನ್ನು ಬೊಮ್ಮಾಯಿ ಅವರೇ ಹೇಳಬೇಕು’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.