ADVERTISEMENT

ಕೋವಿಡ್ ಸಂಭಾವ್ಯ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಾಗಿದೆ: ಬಸವರಾಜ ಬೊಮ್ಮಾಯಿ

ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ 

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:42 IST
Last Updated 1 ಜನವರಿ 2022, 7:42 IST
   

ಬೆಂಗಳೂರು: 'ಆರ್ಥಿಕವಾಗಿ, ಆಡಳಿತದ ದೃಷ್ಟಿಯಿಂದ 2022 ಸವಾಲಿನ ವರ್ಷ. ಇದನ್ನು ಎಲ್ಲರೂ ಒಗ್ಗೂಡಿ ಸಮರ್ಥವಾಗಿ ಎದುರಿಸುವ ಸಂಕಲ್ಪ ಮಾಡಬೇಕಾಗಿದೆ' ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸ ವರ್ಷದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಶನಿವಾರ ಶುಭಾಶಯ ಕೋರಿ ಮಾತನಾಡಿದ ಅವರು, 'ಕೋವಿಡ್ ಸಂಭಾವ್ಯ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಾಗಿದೆ. ಜೊತೆಗೆ ಆರ್ಥಿಕತೆಯೂ ಮುನ್ನಡೆಯಬೇಕಾಗಿದೆ. ಕೇವಲ ನಿರ್ಬಂಧಗಳನ್ನು ಜಾರಿಗೊಳಿಸಿ ಸುಮ್ಮನಿರಲಾಗದು. ನಾವು ಈ ಸವಾಲನ್ನು ವಿಭಿನ್ನ ಕಾರ್ಯತಂತ್ರದಿಂದ ಎದುರಿಸಬೇಕು. ಇದಕ್ಕಾಗಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ' ಎಂದರು.

'ನಿಮ್ಮ ನಿಮ್ಮ ಇಲಾಖೆಯಲ್ಲಿ ಅನವಶ್ಯಕ ವೆಚ್ಚ ಕಡಿತಗೊಳಿಸಿ. ತೆರಿಗೆ ಸಂಗ್ರಹ ಇಲಾಖೆಗಳು ಇನ್ನಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಜ್ಯದ ಆರ್ಥಿಕತೆಯನ್ನು ಉತ್ತಮ ಪಡಿಸಬೇಕು.

ADVERTISEMENT

ಸಕಾರಾತ್ಮಕ ಭಾವನೆಯಿಂದ ಈ ಸವಾಲು ಎದುರಿಸಬೇಕು. ಉತ್ತಮ ಚಿಂತನೆ ಉತ್ತಮ ಕೆಲಸಗಳಿಗೆ ಎಡೆ ಮಾಡುತ್ತವೆ. ಉತ್ತಮ ಕೆಲಸಗಳು ಉತ್ತಮ ಜೀವನಕ್ಕೆ ದಾರಿ. ಆದ್ದರಿಂದ ಸಕಾರಾತ್ಮಕವಾಗಿ ಯೋಚಿಸಿ, ನಿಮ್ಮ ಕೆಲಸವನ್ನು ಪ್ರೀತಿಸಿ. ಆಗ ಫಲಿತಾಂಶ ಉತ್ತಮವಾಗಿರುತ್ತದೆ' ಎಂದು ಸಲಹೆ ನೀಡಿದರು.

'5 ತಿಂಗಳಲ್ಲಿ ಆಡಳಿತದಲ್ಲಿ ಅತಿ ಕಡಿಮೆ ಹಸ್ತಕ್ಷೇಪ ಮಾಡಿದ ಸರ್ಕಾರ ನಮ್ಮದು. ನೀವು ಸ್ವತಃ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ನಿಮ್ಮ ಅನುಭವದ ಫಲ ರಾಜ್ಯದ ಬಡ ಜನತೆಗೆ ಅನುಕೂಲ ಮಾಡಿಕೊಡಲಿ' ಎಂದು ಹಾರೈಸಿದರು.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಪ್ರವೀಣ್ ಸೂದ್ ಮತ್ತು ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.