ADVERTISEMENT

ವಕೀಲರ ನೆರವು ಆರೋಪಿಯ ಹಕ್ಕು: ಹೈಕೋರ್ಟ್

ಅತ್ಯಾಚಾರ ಆರೋಪ: ಮರು ವಿಚಾರಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 20:29 IST
Last Updated 19 ಫೆಬ್ರುವರಿ 2022, 20:29 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಬಂಧನದಲ್ಲಿರುವ ಆರೋಪಿಯ ಪರ ವಕೀಲರು ಕೋರ್ಟ್‌ಗೆ ಹಾಜರಾಗದೇ ಇದ್ದಾಗ ವಿಚಾರಣಾ ನ್ಯಾಯಾಲಯ ಆರೋಪಿಗೆ ಕಾನೂನು ನೆರವು ಒದಗಿಸುವ ಮೂಲಕ ವಕೀಲರನ್ನು ನೇಮಿಸಿಕೊಡುವ ಬದ್ಧತೆ ಹೊಂದಿರುತ್ತದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅತ್ಯಾಚಾರ ಆರೋಪದಡಿ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೋಮಶೇಖರ ಅಲಿಯಾಸ್ ಸೋಮ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದ್ದು,‘ಅರ್ಜಿದಾರನಿಗೆ ವಕೀಲರ ನೆರವು ನೀಡಬೇಕು. ಪ್ರಕರಣವನ್ನು ಪುನಃ ವಿಚಾರಣೆ ನಡೆಸಿ ವಿಲೇವಾರಿ ಮಾಡಬೇಕು’ ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

‘ಅರ್ಜಿದಾರ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಆತನ ಪರ ವಕೀಲರು ಪಾಟಿ ಸವಾಲಿನ ವಿಚಾರಣೆಗೆ ಹಾಜರಾಗಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವು ನೀಡಬೇಕಿತ್ತು. ಆದರೆ, ನೀಡಿಲ್ಲ. ಸಾಕ್ಷಿಗಳ ಪಾಟಿ ಸವಾಲು ನಡೆಯದ ಕಾರಣ ಸೋಮಶೇಖರನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಲಾಗಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.

ADVERTISEMENT

‘ಅಗತ್ಯ ಸಂದರ್ಭಗಳಲ್ಲಿ ಉಚಿತ ಕಾನೂನು ನೆರವು ನೀಡಲೆಂದೇ ಕಾನೂನು ಸೇವಾ ಪ್ರಾಧಿಕಾರ ರೂಪಿಸಲಾಗಿದೆ. ಈ ಪ್ರಾಧಿಕಾರವು ರಾಷ್ಟ್ರೀಯ ಮಟ್ಟದಿಂದ ತಾಲ್ಲೂಕು ಹಂತದವರೆಗೆ ಇದ್ದು, ಸಿಆರ್‌ಪಿಸಿ ಕಲಂ 304ರ ಪ್ರಕಾರ ಸರ್ಕಾರದ ವೆಚ್ಚದಲ್ಲಿ ಉಚಿತವಾಗಿ ವಕೀಲರ ನೆರವು ನೀಡಬೇಕಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ಮನಗಾಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.